ಪಾಕ್ ಆಕ್ರಮಿತ ಕಾಶ್ಮೀರ: ಭಾರತದ ತರಾಟೆ
ನವದೆಹಲಿ: ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ವಿಶ್ವಸಂಸ್ಥೆಯಲ್ಲಿ 2020 ಸೆಪ್ಟೆಂಬರ 28ರ ಸೋಮವಾರ ಖಂಡತುಂಡವಾಗಿ ತಿರಸ್ಕರಿಸಿದ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಕಿರುಕುಳ, ಬಲವಂತದ ಕಣ್ಮರೆಗಳು ಮತ್ತು ಹೊರಗಿನವರ ಪ್ರವೇಶಕ್ಕೆ ಪಾಕಿಸ್ತಾನ ತಡೆ ಹಾಕಲಿ ಎಂದು ಆಗ್ರಹಿಸಿತು.
ಜಿನೀವಾದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ತನ್ನ ‘ಉತ್ತರಿಸುವ ಹಕ್ಕನ್ನು’ ಚಲಾಯಿಸಿದ ಭಾರತವು ಪಾಕಿಸ್ತಾನವು ‘ಭಯೋತ್ಪಾದಕರಿಗೆ ಸುರಕ್ಷಿತ ನೆಲೆಯಾಗಿ ಮುಂದುವರೆದಿದೆ ಮತ್ತು ಭಯೋತ್ಪಾದಕರಿಗೆ ಹೆಚ್ಚಿನ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ ಹಾಗೂ ಉಗ್ರರ ಉಡಾವಣಾ ತಾಣಗಳನ್ನು ತೆರೆದಿದೆ’ ಎಂದು ಟೀಕಿಸಿತು.
’ಪಾಕಿಸ್ತಾನದ ಯಾವುದೇ ಭಾರತ ವಿರೋಧಿ ಪೊಳ್ಳು ಆರೋಪಗಳು ಅದರ ಆಧೀನದಲ್ಲಿ ಇರುವ ಪ್ರದೇಶದಲ್ಲಿನ ಅಲ್ಪಸಂಖ್ಯಾತರ ದನಿಗಳನ್ನು ಅಡಗಿಸಲು ಸಾಧ್ಯವಿಲ್ಲ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಬದಲಾಗಿ ತಲೆ ತೆಗೆಯುವ ಒಂದೇ ಆಯ್ಕೆಯನ್ನು ಹೊಂದಿರುವ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಣೆ ಬರಹ ಏನೆಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ’ ಎಂದು ಜಿನೇವಾದಲ್ಲಿ ಕಾಯಂ ಮಿಷನ್‌ನ ಪ್ರಥಮ ಕಾರ್‍ಯದರ್ಶಿಯಾಗಿರುವ ಪವನ್ ಬಧೆ ಹೇಳಿದರು.
’ಪಾಕಿಸ್ತಾನವು ನಿರಂತರವಾಗಿ ಈ ಗೌರವಾನ್ವಿತ ವೇದಿಕೆಯನ್ನು ನನ್ನ ದೇಶದ ವಿರುದ್ಧ ದುರುದ್ದೇಶಪೂರಿತ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬುದು ಈ ಮಂಡಳಿಯ ಕಾಳಜಿಯ ವಿಷಯವಾಗಬೇಕು’ ಎಂದು ಅವರು ನುಡಿದರು.
ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಪಾಕಿಸ್ತಾನವು ’ಅಲ್ಪಸಂಖ್ಯಾತರ ಕಗ್ಗೊಲೆಯ ಮೈದಾನವಾಗಿದೆ’ ಎಂದು ಬಣ್ಣಿಸಿವೆ. ಪಾಕಿಸ್ತಾನದಲ್ಲಿ ಅಹ್ಮದಿ ಸಮುದಾಯವು ಅತ್ಯಂತ ಹೆಚ್ಚು ಕಿರುಕುಳಕ್ಕೆ ಒಳಗಾಗುವ ಸಮುದಾಯವಾಗಿ ಇಂದಿಗೂ ಮುಂದುವರೆದಿದೆ. ನೂರಾರು ಮಂದಿ ಕ್ರೈಸ್ತರು ಪ್ರತಿವರ್ಷವೂ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಅವರ ಪೈಕಿ ಬಹುತೇಕ ಮಂದಿ ಪಾಕಿಸ್ತಾನದಲ್ಲಿ ಹಿಂಸಾತ್ಮಕ ಸಾವುಗಳಿಗೆ ಗುರಿಯಾಗುತ್ತಾರೆ’ ಎಂದು ಬಧೆ ಹೇಳಿದರು.
ವ್ಯಕ್ತಿಗಳು ಮತ್ತು ಇಡೀ ಸಮಾಜದ ವಿರುದ್ಧ ಪಾಕಿಸ್ತಾನವು "ಭಿನ್ನಾಭಿಪ್ರಾಯ ಮತ್ತು ಟೀಕೆಗಳನ್ನು ದಮನಿಸುವ ಸಾಧನವಾಗಿ ಬಲವಂತದ ಕಣ್ಮರೆಯನ್ನು ಸಾಂಸ್ಥೀಕರಣಗೊಳಿಸಿದೆ’ ಎಂದು ಭಾgತ ಹೇಳಿತು.
"ಬಲೂಚಿಸ್ತಾನ, ಖೈಬರ್-ಖ್ತೂನಖ್ವ್ವಾ ಮತ್ತು ಸಿಂಧ್ ಪ್ರದೇಶದಲ್ಲಿ ೧೨ ವರ್ಷ ವಯಸ್ಸಿನ ಮಕ್ಕಳನ್ನು ಅಪಹರಿಸಿ ಆತ್ಮಹತ್ಯಾ ಬಾಂಬರುಗಳಾಗಿ ತರಬೇತಿ ನೀಡಲಾಗುತ್ತದೆ. ಬಲೂಚಿಸ್ತಾನದ ರಾಜಕೀಯ ಬಿಕ್ಕಟ್ಟನ್ನು ದಮನಿಸಲು ಅಲ್ಲಿನ ಜನರ ವಿರುದ್ಧ ಪೂರ್ಣ ಪ್ರಮಾಣದ ನರಮೇಧವನ್ನು ನಡೆಸಿರುವ ಪಾಕಿಸ್ತಾನ, ಅದರ ಸಚಿವರು ಇದನ್ನು ರಾಜಕೀಯ ಬಿಕ್ಕಟ್ಟು ನಿವಾರಣೆಯ ಕ್ರಮ ಎಂದು ಕೊಚ್ಚಿಕೊಳ್ಳುತ್ತಾರೆ ಎಂದು ಭಾರತ ಚುಚ್ಚಿತು.
ಪಾಕಿಸ್ತಾನದ "ವಂಚನೆ ಮತ್ತು ಬೂಟಾಟಿಕೆ’ಯು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾಗಗಳಿಗೆ "ತಾರತಮ್ಯದ ವಸತಿ ಕಾನೂನುಗಳ’ ಮೂಲಕ ಹೊರಗಿನವರ "ಸಂಘಟಿತ ಸಾಮೂಹಿಕ ಒಳಹರಿವಿನಲ್ಲಿ ಪ್ರತಿಫಲಿಸುತ್ತದೆ’ ಎಂದು ಬಧೆ ಹೇಳಿದರು.
"ಪಾಕಿಸ್ತಾನ ಆಕ್ರಮಿತ ಭಾರತೀಯ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಪ್ರತಿ ನಾಲ್ಕು ಜನರಲ್ಲಿ ಮೂವರು ಹೊರಗಿನವರಾಗಿರುವುದು ಅಚ್ಚರಿಯ ಸಂಗತಿಯಾಗಿದೆ. ಪಾಕಿಸ್ತಾನ ಆಕ್ರಮಿತ ಭಾರತೀಯ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ನಾಗರಿಕ, ರಾಜಕೀಯ ಮತ್ತು ಸಾಂವಿಧಾನಿಕ ಹಕ್ಕುಗಳು ಅಸ್ತಿತ್ವದಲ್ಲಿ ಇಲ್ಲದಿದ್ದರೂ ದುರುದ್ದೇಶಪೂರಿತ ಆರ್ಥಿಕ ನೀತಿಗಳು ಜನರನ್ನು ತೀವ್ರ ಬಡತನದ ಜೀವನಕ್ಕೆ ತಳ್ಳಿವೆ’ ಎಂದು ಅವರು ವಿವರಿಸಿದರು.
ಇದೇ ವೇಳೆಯಲ್ಲಿ, ‘ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನ ಆಕ್ರಮಿತ ಭಾರತೀಯ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಪಾಕಿಸ್ತಾನ ಪೂರ್ಣ ಪ್ರಮಾಣದ ತರಬೇತಿ ಶಿಬಿರಗಳು ಮತ್ತು ಭಯೋತ್ಪಾದಕರ ಉಡಾವಣಾ ತಾಣಗಳನ್ನು ಹೆಚ್ಚಿಸುತ್ತಿದೆ. ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ನೆಲೆಯಾಗಿ ಉಳಿದಿದೆ. ಕೋವಿಡ್ -೧೯ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಗತ್ತು ಹೋರಾಡುತ್ತಿದ್ದರೆ, ಪಾಕಿಸ್ತಾನವು ತನ್ನ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ೪,೦೦೦ ಕ್ಕೂ ಹೆಚ್ಚು ನಿಷೇಧಿತ ಭಯೋತ್ಪಾದಕರನ್ನು ಪಟ್ಟಿಯಿಂದ ಹೊರಹಾಕಲು ಅವಕಾಶ ನೀಡುವಂತೆ ವಿಶ್ವಕ್ಕೆ ಕಣ್ಸನ್ನೆ ಮಾಡುತ್ತಿದೆ’ ಎಂದು ಅವರು ಹೇಳಿದರು.
"ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಭೂಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ವಾಸ್ತವವನ್ನು ನೋಡಬೇಕು ಹಾಗೂ ಇತರ ದೇಶಗಳ ಪ್ರದೇಶಗಳಿಗಾಗಿ ಅಪೇಕ್ಷೆ ಪಡುವುದನ್ನು ನಿಲ್ಲಿಸಬೇಕು’ ಎಂದು ಬಧೆ ಖಡಖ್ ಆಗಿ ಹೇಳಿದರು.
"ತನ್ನ ದೇಶವು ಪತ್ರಕರ್ತರು ಮತ್ತು ಮಾನವ ಹಕ್ಕುಗಳ ರಕ್ಷಕರ ಮುಖ್ಯತಾಣ’ ಎಂಬುದಾಗಿ ಕೊಚ್ಚಿಕೊಳ್ಳುವ ಪಾಕಿಸ್ತಾನದಲ್ಲಿ ಆಗಾಗ ಕೊಲೆ, ಕಿರುಕುಳ ಮತ್ತು ಹಲ್ಲೆಗೆ ಒಳಗಾಗುತ್ತಿರುವವರು ಪತ್ರಕರ್ತರು ಮತ್ತು ಮಾನವ ಹಕ್ಕುಗಳ ರಕ್ಷಕರೇ ಎಂಬುದನ್ನು ಅಂತಾರಾಷ್ಟ್ರೀಯ ಸಂಸ್ಥೆಗಳ ಅಂಕಿಅಂಶಗಳು ಮತ್ತು ದತ್ತಾಂಶಗಳು ತೋರಿಸುತ್ತವೆ ಎಂದೂ ಅವರು ನುಡಿದರು.
No comments:
Post a Comment