ಭಾರತದ ಉತ್ತರ ಗಡಿಯಲ್ಲಿ ಚೀನಾದಿಂದ ೬೦,೦೦೦ ಸೈನಿಕರ ಜಮಾವಣೆ
ವಾಷಿಂಗ್ಟನ್: ಕೆಟ್ಟ ವರ್ತನೆ ಮತ್ತು ಕ್ವಾಡ್ ದೇಶಗಳಿಗೆ ಅದು ಒಡ್ಡುತ್ತಿರುವ ಬೆದರಿಕೆಗಾಗಿ ಚೀನಾವನ್ನು 2020 ಅಕ್ಟೋಬರ್ 10ರ ಶನಿವಾರ ತರಾಟೆಗೆ ತೆಗೆದುಕೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರು ’ಭಾರತದ ಉತ್ತರ ಗಡಿಯಲ್ಲಿ ಚೀನಾ ೬೦,೦೦೦ ಸೈನಿಕರನ್ನು ಜಮಾಯಿಸಿದೆ’ ಎಂದು ಆಪಾದಿಸಿದರು.
ಟೋಕಿಯೋದಲ್ಲಿ ನಡೆದ ಕ್ವಾಡ್ ಗುಂಪು ಎಂಬುದಾಗಿ ಕರೆಯಲ್ಪಡುವ ಇಂಡೋ- ಪೆಸಿಫಿಕ್ ರಾಷ್ಟ್ರಗಳಾದ ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಈ ೪ ರಾಷ್ಟ್ರಗಳ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಪಾಲ್ಗೊಂಡು ವಾಪಸಾದ ಬಳಿಕ ಪೊಂಪಿಯೋ ಸಂದರ್ಶನ ಒಂದರಲ್ಲಿ ಮಾತನಾಡಿದರು.
ಕೊರೋನವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಕ್ವಾಡ್ ರಾಷ್ಟ್ರಗಳ ಮೊದಲ ವೈಯಕ್ತಿಕ ಮಾತುಕತೆ ಇದಾಗಿದ್ದು, ಇಂಡೋ-ಪೆಸಿಫಿಕ್, ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾದ ಆಕ್ರಮಣಕಾರಿ ಮಿಲಿಟರಿ ನಡವಳಿಕೆಯ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆಯಿತು.
ಟೋಕಿಯೊದಿಂದ ಹಿಂದಿರುಗಿದ ನಂತರ ದಿ ಗೈ ಬೆನ್ಸನ್ ಶೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೊಂಪಿಯೋ ’ಭಾರತದ ಉತ್ತರ ಗಡಿಯಲ್ಲಿ ಚೀನಾ ೬೦,೦೦೦ ಸೈನಿಕರನ್ನು ಜಮಾಯಿಸಿದೆ’ ಎಂದು ಹೇಳಿದರು.
"ನಾನು ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ವಿದೇಶಾಂಗ ಸಚಿವರು ಸಭೆಯಲ್ಲಿ ಇದ್ದೆವು. ಕ್ವಾಡ್ ಸಮೂಹವು ನಾಲ್ಕು ದೊಡ್ಡ ಪ್ರಜಾಪ್ರಭುತ್ವಗಳು, ನಾಲ್ಕು ಪ್ರಬಲ ಆರ್ಥಿಕತೆಗಳು, ನಾಲ್ಕು ರಾಷ್ಟ್ರಗಳು ಎಂದು ಕರೆಯುವ ಒಂದು ಸಮೂಹವಾಗಿದ್ದು, ಇದರ ಪ್ರತಿಯೊಬ್ಬ ಸದಸ್ಯರೂ ಚೀನೀ ಕಮ್ಯೂನಿಸ್ಟ್ ಪಕ್ಷವು ಹೇರಿರುವ ಬೆದರಿಕೆಗಳಿಗೆ ಒಳಗಾಗಿದೆ’ ಎಂದು ಅವರು ಹೇಳಿದರು.
ಪೊಂಪಿಯೋ ಮಂಗಳವಾರ ಟೋಕಿಯೊದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿದ್ದರು ಮತ್ತು ಇಂಡೋ-ಪೆಸಿಫಿಕ್ ಮತ್ತು ಜಗತ್ತಿನಾದ್ಯಂತ ಪ್ರಗತಿ, ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಗಾಗಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿಹೇಳಿದ್ದರು.
ಜೈಶಂಕರ್ ಅವರೊಂದಿಗಿನ ಭೇಟಿಯನ್ನು "ಉತ್ಪಾದಕ" ಎಂದು ಪೊಂಪಿಯೋ ಬಣ್ಣಿಸಿದರು. "ಕ್ವಾಡ್ ರಾಷ್ಟ್ರಗಳ ಜನರಾದ ನಾವೆಲ್ಲರೂ ಬಹಳ ಕಾಲದಿಂದ ಮಲಗಿದ್ದೆವು ಎಂದು ಈಗ ನಾವು ಅರ್ಥ ಮಾಡಿಕೊಂಡಿದ್ದೇವೆ. ದಶಕಗಳಿಂದ, ನಮ್ಮ ಮೇಲೆ ಸವಾರಿ ಮಾಡಲು ಚೀನೀ ಕಮ್ಯೂನಿಸ್ಟ್ ಪಕ್ಷಕ್ಕೆ ಪಶ್ಚಿಮವು ಅವಕಾಶ ಮಾಡಿಕೊಟ್ಟಿತು. ಹಿಂದಿನ ಆಡಳಿತವು ಮೊಣಕಾಲಿನವರೆಗೂ ಬಾಗಿ, ನಮ್ಮ ಬೌದ್ಧಿಕ ಆಸ್ತಿ ಮತ್ತು ಅದರೊಂದಿಗೆ ಲಕ್ಷಾಂತರ ಉದ್ಯೋಗಗಳನ್ನು ಕದಿಯಲು ಚೀನಾಕ್ಕೆ ಅವಕಾಶ ಮಾಡಿಕೊಟ್ಟಿತು. ತಮ್ಮ ದೇಶಗಳಲ್ಲೂ ಹೀಗಾಗಿದೆ ಎಂಬುದನ್ನು ಅವರು (ಇತರ ಕ್ವಾಡ್ ದೇಶಗಳು) ಅರ್ಥ ಮಾಡಿಕೊಂಡಿವೆ’ ಎಂದು ಪೊಂಪಿಯೋ ಸಂದರ್ಶನದಲ್ಲಿ ಹೇಳಿದರು.
ಲ್ಯಾರಿ ಒ’ಕಾನ್ನರ್ ಅವರೊಂದಿಗಿನ ಮತ್ತೊಂದು ಸಂದರ್ಶನದಲ್ಲಿ, ಪೊಂಪಿಯೋ ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರ ಸಭೆಗಳಲ್ಲಿ, ಚೀನೀ ಕಮ್ಯೂನಿಸ್ಟ್ ಪಕ್ಷವು ಒಡ್ಡುತ್ತಿರುವ ಬೆದರಿಕೆಗಳನ್ನು ವಿರೋಧಿಸಲು ಒಂದು ನೀತಿಯನ್ನು ಜಂಟಿಯಾಗಿ ರೂಪಿಸಲು ನಾವು ಚಿಂತಿಸಿದೆವು ಎಂದು ಅವರು ನುಡಿದರು.
"ಈ ಹೋರಾಟದಲ್ಲಿ ಅಮೆರಿಕವು vನ್ನ ಮಿತ್ರ ಮತ್ತು ಪಾಲುದಾರರಿಗೆ ಸಂಪೂರ್ಣ ಬೆಂಬಲ ನೀಡುವ ಅಗತ್ಯವಿದೆ’ ಎಂದು ಅವರು ಹೇಳಿದರು.
‘ಅವರೆಲ್ಲರೂ ಇದನ್ನು ನೋಡಿದ್ದಾರೆ, ಅದು ಭಾರತವಂತೂ ತನ್ನ ಈಶಾನ್ಯ ಭಾಗದಲ್ಲಿರುವ ಹಿಮಾಲಯದಲ್ಲಿ ಚೀನೀಯರೊಂದಿಗೆ ದೈಹಿಕ ಮುಖಾಮುಖಿಯಾಗುತ್ತಿದೆ. ಚೀನಿಯರು ಈಗ ಉತ್ತರದಲ್ಲಿ ಭಾರತದ ವಿರುದ್ಧ ಬೃಹತ್ ಪಡೆಗಳನ್ನು ಒಟ್ಟುಗೂಡಿಸಲು ಪ್ರಾರಂಭಿಸಿದ್ದಾರೆ’ ಎಂದು ಅವರು ಹೇಳಿದರು.
ಭಾರತ ಮತ್ತು ಚೀನಾ ಮೇ ತಿಂಗಳ ಆರಂಭದಿಂದ ಪೂರ್ವ ಲಡಾಖ್ ಕಹಿ ಗಡಿರೇಖೆಯಲ್ಲಿ ಮುಖಾಮುಖಿಯಾಗಿವೆ.
ಬಿಕ್ಕಟ್ಟು ಇತ್ಯರ್ಥಕ್ಕಾಗಿ ಉಭಯ ಕಡೆಯವರು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿದ್ದಾರೆ. ಆದಾಗ್ಯೂ, ಬಿಕ್ಕಟ್ಟು ಇತ್ಯರ್ಥಗೊಳಿಸುವಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ. ಆಗಸ್ಟ್ ಕೊನೆಯ ವಾರದಲ್ಲಿ ಪ್ಯಾಂಗೊಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿರುವ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಚೀನಾ ವಿಫಲ ಯತ್ನ ನಡೆಸಿತ್ತು.
"ಚೀನೀಯರು ಒಪ್ಪಂದವನ್ನು ವೈರಸ್ಸಿನೆಡೆಗೆ ತಳ್ಳಿದರು ಎಂಬುದಾಗಿ ಹೇಳುವ ಸರಳವಾದ ಕೆಲಸವನ್ನು ಆಸ್ಟ್ರೇಲಿಯನ್ನರು ಮಾಡಲಿ, ಆದರೆ ಆದದ್ದು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಬಯಸುತ್ತೇವೆ ಮತ್ತು ನಾವು ಸಂಪೂರ್ಣ ತನಿಖೆ ನಡೆಸಬೇಕಾಗಿದೆ ಎಂದು ನಾವು ವಾದಿಸಿದೆವು. ಇದಕ್ಕೆ ಪ್ರತಿಯಾಗಿ, ಚೀನೀ ಕಮ್ಯುನಿಸ್ಟ್ ಪಕ್ಷವು ಆಸ್ಟ್ರೇಲಿಯನ್ನರನ್ನು ಸುಲಿಗೆ ಮಾಡಲು, ಒತ್ತಾಯಿಸಲು, ಪೀಡಿಸಲು ಪ್ರಾರಂಭಿಸಿತು’ ಎಂದು ಪೊಂಪಿಯೋ ಹೇಳಿದರು.
ಈ ಪ್ರತಿಯೊಂದು ದೇವೂ ಇದನ್ನು ನೋಡಿದೆ. ಈ ಎಲ್ಲ ದೇಶಗಳ ಜನರು ಈಗ ಚೀನೀ ಕಮ್ಯುನಿಸ್ಟ್ ಪಕ್ಷವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
“ಜಗತ್ತು ಜಾಗೃತಗೊಂಡಿದೆ. ಉಬ್ಬರವಿಳಿತವು ತಿರುಗಲು ಪ್ರಾರಂಭಿಸಿದೆ. ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಅಮೆರಿಕವು ಈಗ ಒಕ್ಕೂಟವನ್ನು ನಿರ್ಮಿಸಿದೆ ಮತ್ತು ಅದು ಬೆದರಿಕೆಗೆ ಜಗ್ಗುವುದಿಲ್ಲ. ಉತ್ತಮ ಕ್ರಮ, ಕಾನೂನಿನ ನಿಯಮ ಮತ್ತು ಮೂಲಭೂತ ನಾಗರಿಕ ಸಭ್ಯತೆಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಜಗತ್ತನ್ನು ನಿಯಂತ್ರಿಸುತ್ತದೆ ಹೊರತು ಸರ್ವಾಧಿಕಾರಿ ಆಡಳಿತಗಳ ಮೂಲಕವಲ್ಲ’ ಎಂದು ಪೊಂಪಿಯೋ ನುಡಿದರು.
ಇನ್ನೊಂದು ಸುದ್ದಿ ಸಂಸ್ಥೆಗೆ ನೀಡಿದ ಮೂರನೇ ಸಂದರ್ಶನದಲ್ಲಿ, ಟ್ರಂಪ್ ಆಡಳಿತದಲ್ಲಿರುವ ಅಮೆರಿಕವು ಚೀನಾವನ್ನು ಹಿಂದಕ್ಕೆ ತಳ್ಳಲು ಮಿತ್ರ ರಾಷ್ಟ್ರಗಳ ಒಕ್ಕೂಟ ಕಟ್ಟುತ್ತಿದೆ ಎಂದು ಅವರು ಹೇಳಿದರು.
"ಚೀನಾದ ಕಮ್ಯುನಿಸ್ಟ್ ಪಕ್ಷವು ಒಡ್ಡುತ್ತಿರುವ ಬೆದರಿಕೆಯಿಂದ ಅಮೆರಿಕದ ಜನರನ್ನು ರಕ್ಷಿಸುವ ಗುರಿಯನ್ನು ನಾವು ಹೊಂದಿದ್ದೇ’" ಎಂದು ಅವರು ಹೇಳಿದರು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾದೊಂದಿಗೆ ಭಾರತ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುತ್ತಿದೆ.
No comments:
Post a Comment