ಸರ್ಕಾರಿ ನೌಕರರಿಗೆ ಕೇಂದ್ರದ ದೀಪಾವಳಿ ಕೊಡುಗೆ
೧೦,೦೦೦ ರೂ ಹಬ್ಬದ ಮುಂಗಡ: ನಿರ್ಮಲಾ
ನವದೆಹಲಿ: ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಹೆಚ್ಚಿನ ವೆಚ್ಚಕ್ಕೆ ಅನುಕೂಲ ಕಲ್ಪಿಸಿಕೊಡಲು ಪ್ರವಾಸದ ಚೀಟಿ (ಟ್ರಾವಲ್ ವೋಚರ್) ಮತ್ತು ಹಬ್ಬದ ಯೋಜನೆಯನ್ನು ೨೦೨೦ ರ ಅಕ್ಟೋಬರ್ ೧೨ ರ ಸೋಮವಾರ ಪ್ರಕಟಿಸಿತು.
ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡವಾಗಿ ೧೦,೦೦೦ ರೂ.ಗಳನ್ನು ಒದಗಿಸುವ ಯೋಜನೆಯನ್ನು ಪುನಾರಂಭ ಮಾಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಪೂರ್ವಪಾವತಿ ರುಪೇ ಕಾರ್ಡ್ ನೀಡುವ ಮೂಲಕ ಈ ಹಬ್ಬದ ಮುಂಗಡವನ್ನು ಸರ್ಕಾರ ಭರಿಸುತ್ತದೆ. ನೌಕರರು ಈ ಹಣವನ್ನು ನಗದು ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ. ಡಿಜಿಟಲ್ ವಿಧಾನಗಳನ್ನು ಬಳಸಿಕೊಂಡು ಈ ಹಣವನ್ನು ವೆಚ್ಚ ಮಾಡಬಹುದು. ಈ ಹಬ್ಬದ ಮುಂಗಡವು ಗೆಜೆಟೆಡ್ ಅಲ್ಲದವರೂ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ್ಲ ಉದ್ಯೋಗಿಗಳಿಗೆ ಲಭ್ಯವಿದೆ.
ಇದು ಬಡ್ಡಿರಹಿತ ಮುಂಗಡವಾಗಿರುತ್ತದೆ ಮತ್ತು ೧೦ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರಗಳು ನೀಡುವ ಹಬ್ಬದ ಮುಂಗಡದಂತೆಯೇ, ಹಬ್ಬದ ಮುಂಗಡವನ್ನು ನೀಡುವ ಆಯ್ಕೆಯನ್ನು ರಾಜ್ಯ ಸರ್ಕಾರಗಳು ಹೊಂದಿವೆ.
ಆರನೇ ವೇತನ ಆಯೋಗದ ಪ್ರಕಾರ ಗೆಜೆಟೆಡ್ ಅಲ್ಲದ ಅಧಿಕಾರಿಗಳಲ್ಲಿ ಮತ್ತು ಕೆಳಗಿನ ಶ್ರೇಣಿಗಳಲ್ಲಿ ಉದ್ಯೋಗಿಗಳಿಗೆ ೪,೫೦೦ ರೂ.ಗಳ ಉತ್ಸವ ಮುಂಗಡ ಲಭ್ಯವಿತ್ತು.
ಏಳನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಜಾರಿಗೊಳಿಸಿದಾಗ ಅದನ್ನು ರದ್ದು ಪಡಿಸಲಾಗಿತ್ತು.
ಸೋಮವಾರದ ಪ್ರಕಟಣೆಯು ಹಬ್ಬದ ಮುಂಗಡವನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ಮಾತ್ರ ನೀಡುತ್ತದೆ ಮತ್ತು ಸ್ವೀಕರಿಸಿದ ಹಣವನ್ನು ಮಾರ್ಚ್ ೩೧, ೨೦೨೧ ರ ಮೊದಲು ಖರ್ಚು ಮಾಡಬೇಕಾಗುತ್ತದೆ.
ಎಲ್‌ಟಿಸಿ ನಗದು ಚೀಟಿ ಯೋಜನೆಯಡಿ, ಸರ್ಕಾರಿ ನೌಕರರು ಪಡೆಯವ ರಜೆಯ ೩ ಪಟ್ಟು ಟಿಕೆಟ್ ಶುಲ್ಕವನ್ನು ನಗದು ಮೊತ್ತವನ್ನು ಪಡೆಯಬಹುದು ಮತ್ತು ಕನಿಷ್ಠ ೧೨ ಶೇಕಡಾ ಜಿಎಸ್‌ಟಿಯನ್ನು ಆಕರ್ಷಿಸುವ ವಸ್ತುಗಳನ್ನು ಖರೀದಿಸಲು ಕೂಡಾ ಪಡೆಯಬಹುದು.
ಮರುಪಾವತಿ ೧೦ ಕಂತುಗಳಲ್ಲಿ ಇರಲಿದ್ದು, ಇದಕ್ಕಾಗಿ ಕೇಂದ್ರ ಬೊಕ್ಕಸಕ್ಕೆ ೪,೦೦೦ ಕೋಟಿ ರೂ.ವೆಚ್ಚವಾಗಲಿದೆ.
No comments:
Post a Comment