Thursday, November 19, 2020

ಬೆಂಗಳೂರು ತಂತ್ರಜ್ಞಾನ ಮೇಳ: ಪ್ರಧಾನಿ ಮೋದಿಯಿಂದ ಉದ್ಘಾಟನೆ

 ಬೆಂಗಳೂರು ತಂತ್ರಜ್ಞಾನ ಮೇಳ: ಪ್ರಧಾನಿ ಮೋದಿಯಿಂದ ಉದ್ಘಾಟನೆ

ಬೆಂಗಳೂರು:  ಟೆಕ್ನಾಲಜಿ ಫಸ್ಟ್(ತಂತ್ರಜ್ಞಾನ ಮೊದಲು) ಕೇಂದ್ರ ಸರ್ಕಾರದ ಪ್ರಮುಖ ನೀತಿಯಾಗಿದ್ದು, ಡಿಜಿಟಲ್ ಹಾಗೂ ಟೆಕ್ ಸಮಸ್ಯೆ ಪರಿಹಾರಗಳಿಗಾಗಿ ನಾವು ಯಶಸ್ವಿ ಮಾರುಕಟ್ಟೆಗಳನ್ನು ರೂಪಿಸಿದ್ದೇವೆ ಎಂದು ಪ್ರಧಾನಿ ಮೋದಿ  2020 ನವೆಂಬರ್ 19ರ  ಗುರುವಾರ ಹೇಳಿದರು.

ವಿಡಿಯೋ
ಕಾನ್ಫರೆನ್ಸ್ ಮೂಲಕ ಬೆಂಗಳೂರು ತಂತ್ರಜ್ಞಾನ ಮೇಳ-೨೦೨೦ ಉದ್ಘಾಟಿಸಿದ ಪ್ರಧಾನಿ, ತಂತ್ರಜ್ಞಾನವನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವನ್ನಾಗಿ ಮಾಡುವ ನಮ್ಮ ಉದ್ದೇಶ ಈಡೇರುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ತಂತ್ರಜ್ಞಾನದ ಮೂಲಕ ನಾವು ಮಾನವ ಘನತೆಯನ್ನು ಹೆಚ್ಚಿಸಿದ್ದೇವೆ. ಇದೇ ತಂತ್ರಜ್ಞಾನದ ಸಹಾಯದಿಂದ ನಮ್ಮ ಲಕ್ಷಾಂತರ ರೈತರು ಕೇಂದ್ರ ಸರ್ಕಾರ ನೀಡಿದ ಆರ್ಥಿಕ ನೆರವನ್ನು ಪಡೆದಿದ್ದಾರೆ ಎಂದು ಮೋದಿ ನುಡಿದರು.

ಬೆಂಗಳೂರು ತಂತ್ರಜ್ಞಾನ ಮೇಳದ ೨೩ನೇ ಆವೃತ್ತಿ ಇದಾಗಿದೆ. ಇದಕ್ಕೆ ಮುನ್ನ ೨೨ ಮೇಳಗಳು ಭೌತಿಕ ಪಾಲ್ಗೊಳ್ಳುವಿಕೆಯಿಂದ ನಡೆದು ಪ್ರಪಂಚಾದ್ಯಂತ ಗಮನ ಸೆಳೆದಿದ್ದವು. ಆದರೆ ಬಾರಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ವರ್ಚ್ಯುಯಲ್ ಆಗಿ ಮೇಳ ನಡೆಯುತ್ತಿರುವುದರಿಂದ ಇದಕ್ಕೆ ಸ್ಪಂದನೆ ಹೇಗಿರುತ್ತದೋ ಎಂಬ ಅಂಜಿಕೆ ಆರಂಭದಲ್ಲಿ ಇತ್ತು. ಆದರೆ ದೇಶ ವಿದೇಶಗಳಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿರುವುದು ವಿಶೇಷವಾಗಿ ಗಮನ ಸೆಳೆದಿದೆ.

ಫಿನ್ಲೆಂಡ್, ಇಸ್ರೇಲ್, ನೆದರ್ ಲೆಂಡ್ಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಸ್ವೀಡನ್, ಸ್ವಿಟ್ವರ್ ಲೆಂಡ್, ಡೆನ್ಮಾರ್ಕ್, ತೈವಾನ್, ಜಪಾನ್, ಲಿಥುವಾನಿಯಾ ಸೇರಿದಂತೆ ೨೫ಕ್ಕೂ ಹೆಚ್ಚು ದೇಶಗಳು ಮೇಳವನ್ನು ಕಾತರದಿಂದ ಎದುರು ನೋಡುತ್ತಿವೆ. ೧೦೦ಕ್ಕೂ ಹೆಚ್ಚು ನವೋದ್ಯಮಗಳು, ೪೦೦೦ಕ್ಕೂ ಹೆಚ್ಚು ಉದ್ಯಮ ಗಣ್ಯರು, ಸುಮಾರು ೨೭೦ ವಿಷಯ ಪರಿಣತರು ಹಾಗೂ ೭೦ಕ್ಕೂ ಹೆಚ್ಚು ಗೋಷ್ಠಿಗಳಿಗೆ ಮೇಳ ಸಾಕ್ಷಿಯಾಗಲಿದೆ. ೨೫೦ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಿವೆ. ೨೦,೦೦೦ಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡುವ ನಿರೀಕ್ಷೆ ಇದೆ. ಮೇಳದ ವೇಳೆ ಕರ್ನಾಟಕ ಸರ್ಕಾರವು ಬೇರೆ ದೇಶಗಳೊಂದಿಗೆ ಕನಿಷ್ಠ ಪರಸ್ಪರ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದೆ.

No comments:

Advertisement