ಹಫೀಜ್ ಸಯೀದನಿಗೆ ಜೈಲು ಶಿಕ್ಷೆಯಲ್ಲ, ಮನೆಯಲ್ಲಿ ಆರಾಮದ ರಕ್ಷೆ!
ನವದೆಹಲಿ: ಮುಂಬೈ ಮೇಲಿನ ೨೬/೧೧ರ ಭೀಕರ ದಾಳಿಯ ಸಂಚುಕೋರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಘೋಷಿತ ಭಯೋತ್ಪಾದಕ ಲಷ್ಕರ್-ಇ-ತೊಯ್ಬಾ ಸಂಸ್ಥಾಪಕ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿಲ್ಲ, ಬದಲಿಗೆ ಲಾಹೋರಿನ ತನ್ನ ಜೋಹರ್ ಟೌನ್ ಮನೆಯಲ್ಲಿ ’ಸುಖ ಜೀವನ’ ನಡೆಸುತ್ತಾ ಭಯೋತ್ಪಾದಕ ಗುಂಪಿಗೆ ಮಾಗದರ್ಶನ ಮಾಡುತ್ತಿದ್ದಾನೆ..!
ನಂಬಲರ್ಹ ಮೂಲಗಳು ಪಾಕಿಸ್ತಾನ ಸರ್ಕಾರದ ಈ ದ್ವಂದ್ವ ನಡೆಯನ್ನು 2020 ನವೆಂಬರ
26ರ ಗುರುವಾರ ಬಹಿರಂಗ ಪಡಿಸಿವೆ.
ಭಯೋತ್ಪಾzನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ನ್ಯಾಯಾಲಯದಿಂದ ಫೆಬ್ರುವರಿಯಲ್ಲಿ ೧೦ ವರ್ಷ ಮತ್ತು ಆರು ತಿಂಗಳ ಸೆರೆವಾದ ಶಿಕ್ಷೆಗೆ ಗುರಿಯಾಗುವುದಕ್ಕೆ ತಿಂಗಳುಗಳ ಮೊದಲು ೨೦೧೯ರ ಜುಲೈ ತಿಂಗಳಲ್ಲಿ ಸಯೀದನನ್ನು ಔಪಚಾರಿಕವಾಗಿ ಬಂಧಿಸಲಾಗಿತ್ತು. ಅಮೆರಿಕ ಇದನ್ನು ’ಪ್ರಮುಖ ಹೆಜ್ಜೆ’ ಎಂಬುದಾಗಿ ಬಣ್ಣಿಸಿತ್ತು. ಕಳೆದ ವಾರ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಇನ್ನೆರಡು ಪ್ರಕರಣಗಳಲ್ಲಿ ಸಯೀದನಿಗೆ ಮತ್ತೊಂದು ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು.
ಪಾಕ್ ಸರ್ಕಾರಕ್ಕೆ ವ್ಯಾಪಕವಾದ ಆರ್ಥಿಕ ನಿರ್ಬಂಧಗಳನ್ನು ಉಂಟು ಮಾಡುವ, ಹಣಕಾಸು ಕಾರ್ಯಪಡೆಯ ’ಕಪ್ಪು ಪಟ್ಟಿಗೆ’ ಸೇರುವುದನ್ನು ತಪ್ಪಿಸಿಕೊಳ್ಳಲು ಪಾಕ್ ಸರ್ಕಾರವು ಹಫೀಜ್ ಸಯೀದನನ್ನು ಬಂಧಿಸಿ ವಿಚಾರಣೆಗೆ ಗುರಿ ಪಡಿಸಿತ್ತು. ಪಾಕಿಸ್ತಾನವು ಹಣಕಾಸು ಕಾರ್ಯಪಡೆಯ ’ಕಪ್ಪು ಪಟ್ಟಿಗೆ’ ಸೇರಿದರೆ ಪಾಕಿಸ್ತಾನದ ಆರ್ಥಿಕತೆ ನಾಶವಾಗುತ್ತದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಒಮ್ಮೆ ಹೇಳಿದ್ದರು.
ಆದರೆ ಭಾರತೀಯ ಗುಪ್ತಚರ ಮಾಹಿತಿಗಳ ಪ್ರಕಾರ, ಹಫೀಜ್ ಸಯೀದ್ ಲಾಹೋರಿನ ಬಿಗಿ ಭದ್ರತೆಯ ಕೋಟ್ ಲಖ್ಪತ್ ಜೈಲಿನಲ್ಲಿಲ್ಲ. ಬದಲಿಗೆ ಆತ ತನ್ನ ಮನೆಯಲ್ಲಿ ರಕ್ಷಣಾತ್ಮಕ ಬಂಧನದಲ್ಲಿ ಇದ್ದಾನೆ. ಅತಿಥಿಗಳೊಂದಿಗೆ ಮಾತುಕತೆ ನಡೆಸಲೂ ಅವನಿಗೆ ಅವಕಾಶಗಳನ್ನು ಒದಗಿಸಲಾಗಿದೆ’ ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಪ್ರಕಾರ, ಕಳೆದ ತಿಂಗಳು, ತನ್ನ ಮನೆಯಲ್ಲಿ ಹಫೀಜ್ ಸಯೀದ್ ಭಯೋತ್ಪಾದಕ ಸಂಘಟನೆಯ ಮುಖ್ಯ ಕಾರ್ಯಾಚರಣಾ ಕಮಾಂಡರ್ ಹಾಗೂ ಎಲ್ಇಟಿಯ ಜಿಹಾದ್ ವಿಭಾಗದ ಮುಖ್ಯಸ್ಥ ಜಾಕಿ-ಉರ್-ರೆಹಮಾನ್ ಲಖ್ವಿ ಜೊತೆ ಸಭೆ ನಡೆಸಿದ್ದ. ಸಭೆಯು ಜಿಹಾದ್ ಸಲುವಾಗಿ ಹಣವನ್ನು ಸಂಗ್ರಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಕೇಂದ್ರೀಕರಿಸಿತ್ತು ಎಂದು ತಿಳಿದುಬಂದಿದೆ.
ಸಯೀದ್ನಂತೆಯೇ, ಲಖ್ವಿಯನ್ನು ಕೂಡಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಗೊತ್ತು ಪಡಿಸಿದ ಭಯೋತ್ಪಾದಕ ಮತ್ತು ಮುಂಬೈ ಮೇಲಿನ ೨೬/೧೧ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಎಂಬುದಾಗಿ ಘೋಷಿಸಿದೆ. ಅಂತರರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಭಯೋತ್ಪಾದನೆಗಾಗಿ ಪಾಕಿಸ್ತಾನದ ಭದ್ರತಾ ಪಡೆಗಳಿಂದ ಆತನನ್ನು ಒಂದಕ್ಕಿಂತ ಹೆಚ್ಚು ಬಾರಿ ಬಂಧಿಸಲಾಗಿದೆ. ಆದರೆ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದನಂತೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಆತನನ್ನು ನಿರಂತರವಾಗಿ ಬಿಡುಗಡೆ ಮಾಡಲಾಗಿದೆ. ೨೬/೧೧ ದಾಳಿಗೆ ಮುಂಚಿತವಾಗಿ ಭಾರತದಲ್ಲಿ ವಿಚಕ್ಷಣ ಕಾರ್ಯಾಚರಣೆಗಾಗಿ ಪಾಕಿಸ್ತಾನ ಮೂಲದ ಅಮೆರಿಕದ ನಾಗರಿಕ ಡೇವಿಡ್ ಹೆಡ್ಲಿಯನ್ನು ಮನವೊಲಿಸಲು ಮಾರ್ಗದರ್ಶನ ಮಾಡಿದ್ದು ಮತ್ತು ಅದನ್ನು ನಿರ್ವಹಿಸಿದ್ದು ಲಖ್ವಿ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಹಫೀಜ್ ಸಯೀದನನ್ನು ಸೆರೆಮನೆಯಲ್ಲಿ ಇರಿಸಲಾಗಿಲ್ಲ ಎಂಬ ಗುಪ್ತಚರ ಮಾಹಿತಿಯು, ಭಯೋತ್ಪಾದಕರೊಂದಿಗೆ ವ್ಯವಹರಿಸುವ ಬಗೆಗಿನ ಇಸ್ಲಾಮಾಬಾದಿನ ದಾಖಲೆಗೆ ಅನುಗುಣವಾಗಿಯೇ ಇದೆ ಎಂದು ನವದೆಹಲಿಯಲ್ಲಿನ ಪಾಕಿಸ್ತಾನ ವೀಕ್ಷಕರು ಹೇಳಿದರು.
ಹಫೀಜ್ ಸಯೀದನಿಗೆ ಮೊದಲ ಬಾರಿಗೆ ೧೦ ವರ್ಷ ಮತ್ತು ಆರು ತಿಂಗಳು ಸೆರೆವಾದ ಶಿಕ್ಷೆಯಾದಾಗ ಮೊದಲಿಗೆ ಆಶ್ಚರ್ಯ ಚಕಿತನಾಗಿದ್ದೆ ಎಂದು ಪಾಕಿಸ್ತಾನ ವೀಕ್ಷಕರ ಪೈಕಿ ಒಬ್ಬರು ಹೇಳಿದರು. ಸಯೀದನ ಉಪಯುಕ್ತತೆ ಈಗ ಪಾಕಿಸ್ತಾನಕ್ಕೆ ಉಳಿದಿಲ್ಲ ಎಂಬುದನ್ನು ಇದು ಸೂಚಿಸಿದೆ ಎಂದು ತಾವು ವ್ಯಾಖ್ಯಾನಿಸಿದ್ದಾಗಿ ಅವರು ಒಪ್ಪಿಕೊಂಡರು. ೯/೧೧ ದಾಳಿಯ ನಂತರ ಸಯೀದನನ್ನು ಹಲವಾರು ಬಾರಿ ಬಂಧಿಸಲಾಗಿತ್ತು, ಆದರೆ ಒತ್ತಡ ಕಡಿಮೆಯಾಗುತ್ತಿದ್ದಂತೆಯೇ ಆತನನ್ನು ಮುಕ್ತಗೊಳಿಸಲಾಗುತ್ತಿತ್ತು.
ಹಫೀಜ್ ಸಯೀದನ ನ್ಯಾಯಾಂಗ ಬಂಧನದ ಸುತ್ತಲಿನ ದಾಖಲೆಗಳನ್ನು ಪಾಕಿಸ್ತಾನ ಹೇಗೆ ನಿಭಾಯಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದರು.
"ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನಮ್ಮ ತಿಳುವಳಿಕೆಯಂತೆ ಇದು ಅನೌಪಚಾರಿಕ ವ್ಯವಸ್ಥೆಯಾಗಿರಬಹುದು. ಹಫೀಜ್ ಸಯೀದ್ ಮನೆಯನ್ನು ಜೈಲು ಎಂದು ತಿಳಿಸುವ ಔಪಚಾರಿಕ ಆದೇಶವಿದೆಯೇ ಎಂದು ನಮಗೆ ತಿಳಿದಿಲ್ಲ’ ಎಂದು ಮೇಲೆ ಉಲ್ಲೇಖಿಸಿದ ಗುಪ್ತಚರ ಅಧಿಕಾರಿ ಹೇಳಿದ್ದಾರೆ. ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್‌ನ ಸೇನಾ ಅಧಿಕಾರಿಗಳ ನೆರವಿನೊಂದಿಗೆ ೧೦ ಮಂದಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಪಾಕಿಸ್ತಾನದಿಂದ ಮುಂಬೈಗೆ ತಲುಪಿ ನವೆಂಬರ್ ೨೬ ರಂದು ಅನೇಕ ಸ್ಥಳಗಳಲ್ಲಿ ಗುಂಡು ಹಾರಿಸಿದ ಬಳಿಕದ ೧೨ ವರ್ಷಗಳಲ್ಲಿ, ಇಸ್ಲಾಮಾಬಾದ್, ಹಲವು ಭರವಸೆಗಳ ಹೊರತಾಗಿಯೂ, ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ವಿರುದ್ಧ ತನಿಖೆ ನಡೆಸಿಲ್ಲ ಅಥವಾ ಯಾವುದೇ ನೈಜ ಕ್ರಮ ಕೈಗೊಂಡಿಲ್ಲ. ಮುಂಬೈ ಮೇಲಿನ ಈ ಭಯೋತ್ಪಾದಕ ದಾಳಿಯಲ್ಲಿ ಒಟ್ಟಾರೆಯಾಗಿ, ೧೭೦ ಜನರು ಸಾವನ್ನಪ್ಪಿದ್ದರು. ಭಯೋತ್ಪಾದಕರು ಅಪಹರಿಸಿದ್ದ ’ಎಂ.ವಿ.ಕುಬರ್’ ಎಂಬ ದೋಣಿಯಲ್ಲಿ ಬಂದಿದ್ದ ೪ ನಾವಿಕರೂ ಸಾವನ್ನಪ್ಪಿದ್ದರು. ಮುಂಬೈಯ ತಾಜ್ ಮಹಲ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಕ್ಯಾಮಾ ಆಸ್ಪತ್ರೆ, ಚಾಬಾದ್ ಹೌಸ್, ಆಲ್ಬ್ಲೆಸ್ ಆಸ್ಪತ್ರೆ, ಮೆಟ್ರೋ ಸಿನೆಮಾ ಪ್ರದೇಶದ ಹತ್ತಿರ ಮತ್ತು ಲಿಯೋಪೋಲ್ಡ್ ಕೆಫೆಗಳಲ್ಲಿ ಭಯೋತ್ಪಾದಕರು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಘಟನೆಯಲ್ಲಿ ೩೦೪ ಮಂದಿ ಗಾಯಗೊಂಡಿದ್ದರು.
ಜೀವಂತವಾಗಿ ಸಿಕ್ಕಿಬಿದ್ದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ ವಿಚಾರಣೆಯನ್ನು ಎದುರಿಸಿದ್ದ ಮತ್ತು ೨೦೧೦ರ ಮೇ ತಿಂಗಳಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಮೇಲ್ಮನವಿಗಳ ವಿಚಾರಣೆಯ ಬಳಿಕ ಅಂತಿಮವಾಗಿ ಅವನನ್ನು ಪುಣೆಯ ಯೆರವಾಡಾ ಜೈಲಿನಲ್ಲಿ ೨೦೧೨ರ ನವೆಂಬರ್ ೨೧ರಂದು ಗಲ್ಲಿಗೇರಿಸಲಾಗಿತ್ತು.
ಆದರೆ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳೊಂದಿಗೆ ಸೇರಿ ದಾಳಿಯ ಸಂಚು ರೂಪಿಸಿದ ಮತ್ತು ಸಂಘಟಿಸಿದ ಭಯೋತ್ಪಾದಕರಾದ ಹಫೀಜ್ ಸಯೀದ್ ಮತ್ತು ಲಖ್ವಿಗೆ ಶಿಕ್ಷೆಯಾಗಲಿಲ್ಲ.
೨೦೧೨ರಲ್ಲಿ ಅಮೆರಿಕು ಸಯೀದ ಇರುವ ಸ್ಥಳವನ್ನು ಪತ್ತೆ ಹಚ್ಚಿದವರಿಗೆ ೧೦ ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದಾಗ ಅಮೆರಿಕವನ್ನು ಸಯೀದ ಅಪಹಾಸ್ಯ ಮಾಡಲು ಮುಖ್ಯ ಕಾರಣ ಪಾಕ್ ಸರ್ಕಾರದ ಮೇಲೆ ಆತನಿಗಿದ್ದ ಈ ದೃಢ ವಿಶ್ವಾಸವೇ ಎಂದು ವೀಕ್ಷಕರು ಹೇಳಿದರು.
‘ನನ್ನ ಸ್ಥಳದ ಬಗ್ಗೆ ಮಾಹಿತಿಯನ್ನು ಪ್ರತಿದಿನ ಕಳುಹಿಸಲು ನಾನು ಸಿದ್ಧನಿದ್ದೇನೆ’ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದ ಲಜ್ಜೆಗೆಟ್ಟ ಹಫೀಜ್ ಸಯೀದ್ ’ಬೇಗನೇ ಹಣ ಕಳುಹಿಸಿಕೊಡುವಂತೆ ಅಮೆರಿಕಕ್ಕೆ ಸೂಚಿಸಿದ್ದ’ ಎಂದು ಅವರು ನುಡಿದರು.
No comments:
Post a Comment