ಎನ್‌ಐಎಯಿಂದ ಪಿಡಿಪಿ ಯುವ ವಿಭಾಗದ ಮುಖ್ಯಸ್ಥನ ಬಂಧನ
ಶ್ರೀನಗರ: ಭಯೋತ್ಪಾದಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಯುವ ವಿಭಾಗದ ಅಧ್ಯಕ್ಷ ವಹೀದ್ ಉರ್ ರೆಹಮಾನ್ ಪರ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2020 ನವೆಂಬರ 25ರ ಬುಧವಾರ ಬಂಧಿಸಿತು.
ಅಮಾನತುಗೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ದವಿಂದರ್ ಸಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಪರ್ರಾ ಅವರನ್ನು ನವದೆಹಲಿ ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದ್ದು ಆ ಬಳಿಕ ಪರ್ರಾ ಅವರನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ರಾಜಕಾರಣಿ ಇವರಾಗಿದ್ದಾರೆ.
’ಇತರ ಆರೋಪಿತ ವ್ಯಕ್ತಿಗಳೊಂದಿಗೆ ಪಿತೂರಿ ನಡೆಸುವಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಬೆಂಬಲಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ನವೀದ್ ಬಾಬು-ದವಿಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಯುವ ವಿಭಾಗದ ನಾಯಕ ವಹೀದ್ ಉರ್ ರೆಹಮಾನ್ ಪರ್ರಾ ಅವರನ್ನು ಎನ್‌ಐಎ ಬಂಧಿಸಿದೆ’ ಎಂದು ಎನ್ ಐಎ ವಕ್ತಾರರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಏತನ್ಮಧ್ಯೆ, ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ ಬಂಧನವನ್ನು ಬ್ಲ್ಯಾಕ್ ಮೇಲ್ ಎಂದು ಕರೆದರು ಮತ್ತು ಯುವ ಅಧ್ಯಕ್ಷರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿದರು.
"ಬಿಜೆಪಿ ೩೭೦ ನೇ ವಿಧಿಯನ್ನು ಅಕ್ರಮವಾಗಿ ರದ್ದುಪಡಿಸಿದ್ದಕ್ಕಾಗಿ ದೇಶದ ಮೂಲೆ ಮೂಲೆಯಲ್ಲೂ ಲಾಭ ಪಡೆಯಲು ಯತ್ನಿಸುತ್ತಿದೆ. ಆದರೆ ಕಾಶ್ಮೀರಿಗಳು ಅzರ ರದ್ದತಿಯನ್ನು ಪ್ರಶ್ನಿಸಿದಾಗ ಅವರನ್ನು ಬಂಧಿಸಿ ಶಿಕ್ಷಿಸಲಾಗುತ್ತದೆ. ದವಿಂದರ್ ಸಿಂಗ್ ಯಾರ ಆಜ್ಞೆಯ ಮೇರೆಗೆ ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇತರರನ್ನು ದೂಷಿಸುವ ಪಿತ್ತ ಅವರ ನೆತ್ತಿಗೆ ಏರಿರುವುದು ವಿಪರ್ಯಾಸ’ ಎಂದು ಮೆಹಬೂಬಾ ಟ್ವೀಟ್ ಮಾಡಿದರು.
’ವಹೀದ್‌ಗೆ ಈ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಮತ್ತು ಮುಖ್ಯವಾಹಿನಿಯ ಇvರ ರಾಜಕೀಯ ಪಕ್ಷಗಳನ್ನು ಬ್ಲ್ಯಾಕ್ ಮೇಲ್ ಮಾಡಲು ಮತ್ತು ಬೆದರಿಸಲು ಇಂತಹ ತಂತ್ರಗಳನ್ನು ಬಳಸಲಾಗುತ್ತಿದೆ’ ಎಂದು ಅವರು ಹೇಳಿದರು.
೨೦೧೯ ರಲ್ಲಿಯೂ ಪರ್ರಾ ಅವರನ್ನು ಅಕ್ರಮವಾಗಿ ಬಂಧಿಸಲಾಯಿತು ಎಂದು ಮೆಹಬೂಬಾ ಹೇಳಿದರು. "ಆದರೂ ಪ್ರಜಾಪ್ರಭುತ್ವದಲ್ಲಿನ ಅವರ ನಂಬಿಕೆ ಅಲುಗಾಡಲಿಲ್ಲ ಮತ್ತು ಅವರು ಡಿಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್‍ಮಾನಿಸಿದರು. ಬಹುಶಃ ಪ್ರಜಾಪ್ರಭುತ್ವದ ಶಕ್ತಿಯ ಮೇಲೆ ನಂಬಿಕೆ ಇಡುವವರು ಕೋಮು ಸರ್ಕಾರದ ಕೋಪಕ್ಕೆ ಪಾತ್ರರಾಗುತ್ತಾರೆ ಎಂದು ತೋರುತ್ತದೆ. ವಹೀದ್ ಅವರ ಸಮಗ್ರತೆ, ಪ್ರಾಮಾಣಿಕತೆ ಮತ್ತು ಪಾತ್ರದ ಬಗ್ಗೆ ನಾನು ವೈಯಕ್ತಿಕವಾಗಿ ಭರವಸೆ ನೀಡಬಲ್ಲೆ. ನ್ಯಾಯದಾನ ಒದಗಿಸುವುದು ಮತ್ತು ವಹೀದ್ ಅವರನ್ನು ಶೀಘ್ರದಲ್ಲಿಯೇ ಬಿಡುಗಡೆಯಾಗುವಂತೆ ಖಾತರಿ ನೀಡುವುದು ಈಗ ನ್ಯಾಯಾಂಗಕ್ಕೆ ಸೇರಿದ್ದು’ ಎಂದು ಮುಫ್ತಿ ಟ್ವೀಟ್ ಮಾಡಿದರು.
ದಕ್ಷಿಣ ಕಾಶ್ಮೀರದಿಂದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಪರ್ರಾ ಸಜ್ಜಾಗಿದ್ದರು. ದಕ್ಷಿಣ ಕಾಶ್ಮೀರದ ಯುವಕರಲ್ಲಿ ಅವರು ಬಲವಾದ ನೆಲೆಯನ್ನು ಹೊಂದಿದ್ದಾರೆ ಮತ್ತು ಪಕ್ಷದ ಅನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖರಾಗಿದ್ದರು.
ಹಿಜ್ಬುಲ್ ಕಮಾಂಡರ್ ಸೈಯದ್ ನವೀದ್ ಮುಷ್ತಾಕ್ ಅಲಿಯಾಸ್ ನವೀದ್ ಬಾಬು, ವಕೀಲ ಮೊಹಮ್ಮದ್ ಶಫಿ ಮೀರ್ ಮತ್ತು ಇನ್ನೊಬ್ಬ ಉಗ್ರ ರಫಿ ಅಹ್ಮದ್ ರಾಥರ್ ಅವರನ್ನು ತಮ್ಮ ಕಾರಿನಲ್ಲಿ ಜಮ್ಮುವಿಗೆ ಕರೆದೊಯ್ಯುತ್ತಿದ್ದ ಆರೋಪದ ಮೇಲೆ ಅಮಾನತುಗೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ದವೀಂದರ್ ಸಿಂಗ್ ಅವರನ್ನು ಜನವರಿ ೧೧ ರಂದು ಬಂಧಿಸಲಾಗಿತ್ತು. ಈ ಪ್ರಕರಣವನ್ನು ನಂತರ ಎನ್‌ಐಎಗೆ ಹಸ್ತಾಂತರಿಸಲಾಯಿತು, ಅದು ಕಾಶ್ಮೀರದ ವಿವಿಧ ಭಾಗಗಳಲ್ಲಿ ಹಲವಾರು ದಾಳಿಗಳನ್ನು ನಡೆಸಿತ್ತು.
No comments:
Post a Comment