ಅಮಿತ್ ಶಾ ಜೊತೆ ರೈತ ಗುಂಪುಗಳ ಭೇಟಿ
ನವದೆಹಲಿ: ಕೃಷಿ ಕಾನೂನುಗಳ ವಿರುದ್ಧದ ಬೃಹತ್ ಪ್ರತಿಭಟನೆಗಳನ್ನು ಕೊನೆಗೊಳಿಸಲು ಸರ್ಕಾರದ ಆರನೇ ಸುತ್ತಿನ ಮಾತುಕತೆಗೆ ಒಂದು ದಿನ ಮುಂಚಿತವಾಗಿ ಸಭೆಯ ಕಾರ್ಯಸೂಚಿ ಬಗ್ಗೆ ಚರ್ಚಿಸಲು 2020 ಡಿಸೆಂಬರ್ 08ರ ಮಂಗಳವಾರ ರಾತ್ರಿ ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ರೈತರನ್ನು ಭೇಟಿಯಾದರು.
ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮತ್ತು ರೈತ ಮುಖಂಡ ರುದ್ರು ಸಿಂಗ್ ಮಾನ್ಸಾ ಮತ್ತು ಇತರರು ಅಮಿತ್ ಶಾ ಅವರ ಜೊತೆ ಮಾತುಕತೆಗೆ ಆಗಮಿಸಿದ್ದರು.
ಸರ್ಕಾರವು ರೈತರೊಂದಿಗೆ ಉನ್ನತ ಮಟ್ಟದಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ಸೂಚಿಸುವ ಗೃಹ ಸಚಿವರ ಆಹ್ವಾನವು ರಾಷ್ಟ್ರವ್ಯಾಪಿ ಭಾರತ ಬಂದ್ - ಪ್ರತಿಭಟನೆಗಳ ಮಧ್ಯ ಬಂದಿದ್ದು, ಬಿಕ್ಕಟ್ಟು ಇತ್ಯರ್ಥದ ಹೊಸ ಭರವಸೆ ಮೂಡಿಸಿದೆ.
"ನನಗೆ ಫೋನ್ ಕರೆ ಬಂತು. ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ನಮ್ಮನ್ನು ೭ ಗಂಟೆಗೆ ಬರಲು ತಿಳಿಸಲಾಗಿದೆ’ ಎಂದು ರೈತ ಮುಖಂಡ ರಾಕೇಶ್ ಟಿಕೈಟ್ ಹೇಳಿದ್ದಾರೆ.
ದೆಹಲಿ ಬಳಿಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಗುಂಪುಗಳ ವಿವಿಧ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಟಿಕಾಯತ್ ಹೇಳಿದರು.
"ಯಾವುದೇ ಮಧ್ಯಮ ಮಾರ್ಗ ಇಲ್ಲ, ಇಂದಿನ ಸಭೆಯಲ್ಲಿ ನಾವು ಗೃಹ ಸಚಿವರಿಂದ ಕೇವಲ ’ಹೌದು’ ಅಥವಾ ’ಇಲ್ಲ’ ಉತ್ತರವನ್ನು ಒತ್ತಾಯಿಸುತ್ತೇವೆ" ಎಂದು ರೈತ ಮುಖಂಡ ರುದ್ರು ಸಿಂಗ್ ಮಾನ್ಸಾ ದೆಹಲಿ ಮತ್ತು ಹರಿಯಾಣ ನಡುವಿನ ಸಿಂಗು ಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸರ್ಕಾರದ ಸೂಕ್ತ ಉತ್ತರ ಲಭಿಸದಿದ್ದಲ್ಲಿ ಬುಧವಾರದ ಮಾತುಕತೆಯನ್ನು ರೈತರು ಬಹಿಷ್ಕರಿಸುವ ಸಾಧ್ಯತೆ ಇದೆ ಎಂದೂ ಸುದ್ದಿ ಮೂಲಗಳು ತಿಳಿಸಿವೆ.
ಈಮಧ್ಯೆ, ಕಾಂಗ್ರೆಸ್, ಎನ್ಸಿಪಿ, ಆಮ್ ಆದ್ಮಿ ಪಕ್ಷ, ಡಿಎಂಕೆ ಮತ್ತು ಟಿಆರ್ಎಸ್ ಸೇರಿದಂತೆ ಪ್ರತಿಪಕ್ಷಗಳು ಮಂಗಳವಾರದ ಪ್ರತಿಭಟನೆಗೆ ಬೆಂಬಲ ನೀಡಿದ್ದು, ತಮ್ಮ ನಿಲುವು ಮತ್ತು ಕಳವಳಗಳನ್ನು ತಿಳಿಸಲು ನಾಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದಾರೆ.
ಶುಕ್ರವಾರ ನಡೆದಿದ್ದ ಕೇಂದ್ರ ಸರ್ಕಾರ ಹಾಗೂ ರೈತರ ನಡುವಣ ಏಳು ಗಂಟೆಗಳ ಕಾಲದ ಸಭೆ ಕಗ್ಗಂಟು ಬಿಡಿಸಲು ವಿಫಲವಾಗಿತ್ತು.
No comments:
Post a Comment