ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ ನಿಧನ
ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೊರಾ ಅವರು ತಮ್ಮ ೯೩ ನೇ ಹುಟ್ಟುಹಬ್ಬವನ್ನು ಆಚರಿಸಿದ ಒಂದು ದಿನದ ಬಳಿಕ ದೆಹಲಿಯಲ್ಲಿ 2020 ಡಿಸೆಂಬರ್ 21ರ ಸೋಮವಾರ ನಿಧನರಾದರು.
ಅಕ್ಟೋಬರಿನಲ್ಲಿ ಕೋವಿಡ್ -೧೯ ರಿಂದ ಚೇತರಿಸಿಕೊಂಡಿದ್ದ ವೋರಾ ಅವರನ್ನು ಡಿಸೆಂಬರ್ ೧೯ ರಂದು ಉಸಿರಾಟದ ತೊಂದರೆಗಾಗಿ ದೆಹಲಿಯ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ವೋರಾ ನವಭಾರತ್ ಟೈಮ್ಸ್ ಪತ್ರಿಕೆಯಲ್ಲಿ ಮುಂಬೈಯಲ್ಲಿ (ಆಗಿನ ಬಾಂಬೆ) ವರದಿಗಾರರಾಗಿ ಕೆಲಸ ಮಾಡಿದ್ದರು. ಬಳಿಕ ನಾಗಪುರ ಮತ್ತು ರಾಯಪುರದಲ್ಲಿ ನವಭಾರತ್ ಮತ್ತು ನಂತರ ನಾಗಪುರದಲ್ಲಿ ನಾಗಪುರ ಟೈಮ್ಸ್ ನಲ್ಲಿ ಸೇವೆ ಸಲ್ಲಿಸಿದ್ದರು.
ಸುಮಾರು ಎರಡು ದಶಕಗಳಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಖಜಾಂಚಿಯ ಪ್ರಮುಖ ಸಾಂಸ್ಥಿಕ ಹುದ್ದೆಯಲ್ಲಿದ್ದ ವೋರಾ ಅವರನ್ನು ೨೦೧೮ ರಲ್ಲಿ ಆಡಳಿತದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ಮತ್ತೊಬ್ಬ ಹಿರಿಯ ನಾಯಕ ಅಹ್ಮದ್ ಪಟೇಲ್ ಎಐಸಿಸಿ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡು ಈ ವರ್ಷದ ನವೆಂಬರ್ ೨೫ ರಂದು ನಿಧನರಾಗುವವರೆಗೂ ಈ ಹುದ್ದೆಯನ್ನು ಅಲಂಕರಿಸಿದ್ದರು. ಗುರುಗ್ರಾಮ ಆಸ್ಪತ್ರೆಯಲ್ಲಿ ಕೋವಿಡ್ ನಂತರದ ಸಮಸ್ಯೆಗಳಿಂದ ಅವರು ನಿಧನರಾಗಿದ್ದರು.
ಈ ವರ್ಷದ ಸೆಪ್ಟೆಂಬರಿನಲ್ಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಡಿದ ಪಕ್ಷದ ಪುನರ್ರಚನೆಯಲ್ಲಿ, ವೋರಾ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಪಕ್ಷದ ಯಾವುದೇ ಜವಾಬ್ದಾರಿಯನ್ನು ನೀಡಿರಲಿಲ್ಲ. ವೋರಾ, ಗಾಂಧಿ ಕುಟುಂಬಕ್ಕೆ ನಿಷ್ಠಾವಂvರಾಗಿದ್ದರು.
೧೯೯೩-೧೯೯೬ರ ಅವಧಿಯಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಲಕ್ನೋದಿಂದ ರಾಜ್ಯದ ದೂರದ ಹಳ್ಳಿಯೊಂದಕ್ಕೆ ಪ್ರವಾಸದಲ್ಲಿದ್ದಾಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಹೆಚ್ಚಿನ ಪರಿಚಯಕ್ಕೆ ಕಾರಣವಾದ ಅವರ “ಬಂಪಿ” ಕಾರು ಪ್ರಯಾಣವನ್ನು ಅವರು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ರಾಜ್ಯಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ವೋರಾ ಅವರನ್ನು ಕಂಡಾಗಲೆಲ್ಲ ಸ್ವಾಗತಿಸಲು ಮರೆಯುತ್ತಿರಲಿಲ್ಲ. ಕುಖ್ಯಾತ “ಅತಿಥಿ ಗೃಹ” ಪ್ರಸಂಗದ ಒಂದು ದಿನದ ನಂತರ, ೧೯೯೫ರ ಜೂನ್ ೩ರಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಲು ವೋರಾ ಶಿಫಾರಸು ಮಾಡಿದ್ದರು.
ಈ ಪ್ರಕರಣದಲ್ಲಿ ದಾಳಿಯಿಂದ ಪಾರಾಗಲು ಅತಿಥಿಗೃಹದ ಕೋಣೆಯೊಳಗೆ ಸ್ವತಃ ಬೀಗ ಹಾಕಿಕೊಂಡಿದ್ದ ಮಾಯಾವತಿಯವರ ಮೇಲೆ ಸಮಾಜವಾದಿ ಪಕ್ಷದ ಶಸ್ತ್ರಧಾನಿ ಮುಖಂಡರು ಮತ್ತು ಕಾರ್ಮಿಕರು ಹಲ್ಲೆಗೆ ಯತ್ನಿಸಿದ್ದರು.
ಅದೇ ದಿನ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜನತಾದಳದ ಹೊರಗಿನ ಬೆಂಬಲದೊಂದಿಗೆ ಮಾಯಾವತಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಮೊದಲು ೧೯೮೫ ರಿಂದ ೧೯೮೮ ರವರೆಗೆ ಮತ್ತು ನಂತರ ೧೯೮೯ ರಲ್ಲಿ ಎರಡು ಅವದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೋರಾ, ೧೯೮೮-೮೯ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಂಪುಟದಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಈ ವರ್ಷದ ಏಪ್ರಿಲ್‌ನಲ್ಲಿ ಛತ್ತಿಸ್‌ಗಢದಿಂದ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾದರು.
ರಾಜ್ಯಸಭೆಯಲ್ಲಿ ಅವರ ನಾಲ್ಕು ಅವಧಿಗಳಲ್ಲಿ, ವೊರಾ ಅವರ ಹಾಜರಾತಿ ಮತ್ತು ಭಾಗವಹಿಸುವಿಕೆಗಾಗಿ ಮೆಚ್ಚುಗೆ ಪಡೆದಿದ್ದರು.
ಕಾಂಗ್ರೆಸ್ ನಾಯಕರು ಆಗಾಗ್ಗೆ ವೋರಾ ಅವರ ವಿವೇಕಯುತ ಸಲಹೆಗಳನ್ನು ಉಲ್ಲೇಖಿಸುತ್ತಿದ್ದರು, ಅದು ಅವರನ್ನು ಎಐಸಿಸಿ ಖಜಾಂಚಿ ಹುದ್ದೆಗೆ ಸೂಕ್ತವಾಗಿಸಿತು. ಎಐಸಿಸಿ ಖಜಾಂಚಿಯಾಗಿ, ವೋರಾ ಹಳೆಯ ಪಕ್ಷದ ಹಣಕಾಸನ್ನು ನಿರ್ವಹಿಸುವುದರ ಜೊತೆಗೆ ದೆಹಲಿಯ ೨೪, ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೊಠಡಿಗಳನ್ನು ಹಂಚುವ ಬಗ್ಗೆ ನಿರ್ಧರಿಸಿದ್ದರು..
ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ವೋರಾ ಕಟ್ಟುನಿಟ್ಟಿನ ಜಾಗರೂಕತೆ ಇಟ್ಟುಕೊಂಡಿರುವುದು ಪಕ್ಷದ ವಲಯಗಳಲ್ಲಿ ಎಲ್ಲರಿಗೂ ತಿಳಿದಿತ್ತು.
ಸಂತಾಪ: ರಾಜಕೀಯ ನಾಯಕರು ಪಕ್ಷಾತೀತರಾಗಿ ಅವರ ಸಾವಿಗೆ ಸಂತಾಪ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಿಧನದಿಂದ ಬೇಸರವಾಗಿದೆ ಮತ್ತು ವಿಶಾಲ ಆಡಳಿತ ಮತ್ತು ಸಾಂಸ್ಥಿಕ ಅನುಭವ ಹೊಂದಿರುವ ನಾಯಕ ಎಂದು ನೆನಪಿಸಿಕೊಂಡರು.
ಮೋತಿಲಾಲ್ ವೊರಾ ಜಿ ಅವರು ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದರು, ಅವರು ರಾಜಕೀಯ ಜೀವನದಲ್ಲಿ ಅಪಾರ ಆಡಳಿತ ಮತ್ತು ಸಾಂಸ್ಥಿಕ ಅನುಭವವನ್ನು ಹೊಂದಿದ್ದರು. ಅವರ ನಿಧನದಿಂದ ಬೇಸರವಾಯಿತು. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಸಂತಾಪ ಸೂಚಿಸುವೆ, ಓಂ ಶಾಂತಿ’ಎಂದು ಅವರು ಟ್ವೀಟ್ ಮಾಡಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವೋರಾ ನಿಜವಾದ ಕಾಂಗ್ರೆಸ್ಸಿಗ ಮತ್ತು ಅದ್ಭುತ ಮನುಷ್ಯ ಎಂದು ಹೇಳಿದರು. “ವೋರಾ ಜಿ ನಿಜವಾದ ಕಾಂಗ್ರೆಸ್ಸಿಗ ಮತ್ತು ಅದ್ಭುತ ಮನುಷ್ಯ. ನಾವು ಅವರನ್ನು ತುಂಬಾ ಕಳೆದುಕೊಳ್ಳುತ್ತೇವೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಪ್ರೀತಿ ಮತ್ತು ಸಂತಾಪ’ ಎಂದು ಅವರು ಟ್ವೀಟ್ ಮಾಡಿದರು.
No comments:
Post a Comment