Saturday, December 19, 2020

ಶಿರಾಡಿ ಸುರಂಗ ಮಾರ್ಗ: ಕೇಂದ್ರ ಒಪ್ಪಿಗೆ, ೧೦,೦೦೦ ಕೋಟಿ ರೂ. ವೆಚ್ಚ

 ಶಿರಾಡಿ ಸುರಂಗ ಮಾರ್ಗ: ಕೇಂದ್ರ ಒಪ್ಪಿಗೆ, ೧೦,೦೦೦ ಕೋಟಿ ರೂ. ವೆಚ್ಚ

ಬೆಂಗಳೂರು/ ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಿಸುವ  ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿಸಿದೆ.

ಅಂದಾಜು ೧೦ ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಶೀಘ್ರದಲ್ಲಿ ಇದರ ಟೆಂಡರ್ ಸಹಿತ ಇತರ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ  2020 ಡಿಸೆಂಬರ್ 19ರ ಶನಿವಾರ ತಿಳಿಸಿದರು.

ಕೂಳೂರು ಫಲ್ಗುಣಿ ನದಿಗೆ ನೂತನ ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾವ್ಯಾಪ್ತಿಯ ಐದು ಹಾಗೂ ರಾಜ್ಯಾದ್ಯಂತ ೧೦,೯೦೮ ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಅಂತರ್ಜಾಲ (ಆನ್ ಲೈನ್) ಮೂಲಕ ನೆರೆವೇರಿಸಿ ಅವರು ಮಾತನಾಡಿದರು.

ಕಳೆದ ಏಳೆಂಟು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟಿ ರಸ್ತೆಗೆ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಚರ್ಚೆಯಲ್ಲಿತ್ತು. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಯೋಜನೆ ಬರುವುದರಿಂದ ಹಲವು ಕಾನೂನು ಸಮಸ್ಯೆಗಳಿಂದ ಯೋಜನೆ ಕಾರ್ಯಗತಗೊಳ್ಳಲು ವಿಳಂಬ ಆಗಿತ್ತು. ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಕೆಲವೇ ವರ್ಷಗಳಲ್ಲಿ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.

ಶಿರಾಡಿ ಘಾಟಿ ಸುರಂಗ ಮಾರ್ಗ ೨೩. ಕಿ.ಮೀ. ಉದ್ದ ಇರಲಿದೆ. ಡಿಪಿಆರ್ ಸಿದ್ಧವಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ಹಂತದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಇದು ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ವದ ಕಾಮಗಾರಿಯಾಗಿದೆ ಎಂದು ಗಡ್ಕರಿ ಹೇಳಿದರು.

ಕಾಮಗಾರಿಗಳಿಗೆ ಶಿಲಾನ್ಯಾಸ

ಸಂಪಾಜೆ ಘಾಟಿ ಮಾರ್ಗದಲ್ಲಿ ಹೆದ್ದಾರಿ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ತಡೆಗೋಡೆ ಕಾಮಗಾರಿ, ಕಾಂಕ್ರೀಟ್ ಚರಂಡಿ, ರಸ್ತೆ ಸುರಕ್ಷ ತೆ ಕೆಲಸಗಳನ್ನು ಒಳಗೊಂಡ ಒಟ್ಟು ೫೮.೮೪ ಕೋಟಿ ರೂ.ಗಳ ಕಾಮಗಾರಿ, ಶಿರಾಡಿ ಘಾಟಿ ರಸ್ತೆಯ ಕಣಿವೆ ಭಾಗದಲ್ಲಿ ೩೬. ಕೋಟಿ ರೂ. ವೆಚ್ಚದ ೨೬ ಕಿ.ಮೀ. ಉದ್ದದ ಶಾಶ್ವತ ತಡೆಗೋಡೆ ಕಾಮಗಾರಿ, ಚಾರ್ಮಾಡಿ ಘಾಟಿ ರಸ್ತೆಯಲ್ಲಿ ೧೩ ಕಿ.ಮೀ. ಉದ್ದದ ಕಣಿವೆ ಭಾಗದ ಶಾಶ್ವತ ತಡೆಗೋಡೆಯ ೧೯.೩೬ ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ೬೬ರ ಕೂಳೂರಿನ ಫಲ್ಗುಣಿ ನದಿಗೆ ಅಡ್ಡಲಾಗಿ ೬೯.೦೨ ಕೋಟಿ ರೂ. ವೆಚ್ಚದ ಆರು ಪಥದ ಸೇತುವೆ ನಿರ್ಮಾಣಕ್ಕೂ ಶಿಲಾನ್ಯಾಸ ನೆರವೇರಿಸಿದರು. ಈಗಾಗಲೇ ಉದ್ಘಾಟನೆಗೊಂಡಿರುವ ಗುರುಪುರ ಸೇತುವೆಯನ್ನು ಅವರು ಲೋಕಾರ್ಪಣೆಗೊಳಿಸಿದರು.

No comments:

Advertisement