ಇಂದಿನ ಇತಿಹಾಸ History Today ಜುಲೈ 11
2022: ನವದೆಹಲಿ: ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನದ ಮೇಲೆ ಇರಿಸಲಾಗಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022 ಜುಲೈ 11ರ ಸೋಮವಾರ ಅನಾವರಣಗೊಳಿಸಿದರು. ರಾಷ್ಟ್ರೀಯ ಲಾಂಚನದ ಈ ಪ್ರತಿಮೆಯನ್ನು ಕಂಚಿನಿಂದ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ರಾಷ್ಟ್ರೀಯ ಲಾಂಛನದ ತೂಕ ಸುಮಾರು 9,500 ಕೆ.ಜಿ. ಇದ್ದು, 6.5 ಮೀಟರ್ ಎತ್ತರವಿದೆ. ‘ಇದೊಂದು ಐತಿಹಾಸಿಕ ಕ್ಷಣ. ಇದಕ್ಕೆ ಸಾಕ್ಷಿಯಾಗಿದ್ದು ವಿಶೇಷ ಭಾಗ್ಯ’ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದರು.
2022: ನವದೆಹಲಿ: ಉದ್ಯಮಿ ವಿಜಯ ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ಹಾಗೂ ₹2000 ದಂಡ ವಿಧಿಸಿ ಸುಪ್ರೀಂ ಕೋರ್ಟ್ 2022 ಜುಲೈ 11ರ ಸೋಮವಾರ ತೀರ್ಪು ನೀಡಿತು. "ಸಾಕಷ್ಟು ಶಿಕ್ಷೆ ಅತ್ಯಗತ್ಯ. ಮಲ್ಯ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ" ಎಂದು ಉನ್ನತ ನ್ಯಾಯಾಲಯದ ಪೀಠ ಹೇಳಿತು. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾದ 40 ದಶಲಕ್ಷ ಡಾಲರುಗಳನ್ನು ಹಿಂದಿರುಗಿಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿತು. ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 10 ರಂದು ಮದ್ಯದ ದೊರೆ ವಿರುದ್ಧದ ವಿಚಾರಣೆಯ ಬಳಿಕ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ವಿವಿಧ ಅಂಶಗಳ ಕುರಿತು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಜೈದೀಪ್ ಗುಪ್ತಾ ಅವರನ್ನು ಆಲಿಸಿದ ನಂತರ, ಮಾರ್ಚ್ 15 ರೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತು.ಇಂಗ್ಲೆಂಡಿನಲ್ಲಿ ಇರುವ ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ತಮಗೆ ಲಭಿಸಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೀಡಲಾಗುವ ಶಿಕ್ಷೆಯ ಪ್ರಮಾಣ ಬಗ್ಗೆ ವಾದಿಸಲು ಸಾಧ್ಯವಾಗುವುದಿಲ್ಲ ಎಂದು ಮಲ್ಯ ಅವರ ವಕೀಲರು ಮಾರ್ಚ್ 10 ರಂದು ಪೀಠಕ್ಕೆ ತಿಳಿಸಿದ್ದರು. (ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ: ಭಾರತ ಒಕ್ಕೂಟದ ಎಲ್ಲ ಕೋವಿಡ್-೧೯ ಸಂತ್ರಸ್ಥ ರಾಜ್ಯಗಳಿಗೆ ರಾಷ್ಟ್ರೀಯ ಮಟ್ಟದ ರಿಯಲ್ ಟೈಮ್ ನಿಗಾ ಮತ್ತು ಮಾರ್ಗದರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು 2020 ಜುಲೈ 11ರ ಶನಿವಾರ ನಿರ್ದೇಶನ ನೀಡಿದರು. ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯ ಸ್ಥಿತಿಗತಿ ಬಗ್ಗೆ ನಡೆದ ಪುನರ್ ಪರಿಶೀಲನಾ ಸಭೆಯಲ್ಲಿ ಮಧ್ಯಪ್ರವೇಶ ಮಾಡಿದ ಪ್ರಧಾನಿ ಈ ನಿರ್ದೇಶನ ಕೊಟ್ಟರು. ದೆಹಲಿಯಲ್ಲಿ ಸಾಂಕ್ರಾಮಿಕವನ್ನು ಹತೋಟಿಯಲ್ಲಿ ಇಡಲು ಅಧಿಕಾರಿಗಳು ಕೈಗೊಂಡಿರುವ ಸಮನ್ವಯಿತ ಪ್ರಯತ್ನಗಳನ್ನೂ ಪ್ರಧಾನಿ ಈ ಸಂದರ್ಭದಲ್ಲಿ ಶ್ಲಾಘಿಸಿದರು ಮತ್ತು ಇದೇ ಮಾದರಿಯ ಕಾರ್ಯತಂತ್ರವನ್ನು ನೆರೆಯ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ನ್ಯಾಷನಲ್ ಕ್ಯಾಪಿಟಲ್ ರೀಜನ್ -ಎನ್ ಸಿಆರ್) ಅನುಸರಿಸುವಂತೆ ಸೂಚಿಸಿದರು. ’ದೆಹಲಿಯಲ್ಲಿ ಸಾಂಕ್ರಾಮಿಕವನ್ನು ಹತೋಟಿಯಲ್ಲಿ ಇಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳ ಒಗ್ಗೂಡುವಿಕೆಯ ಪ್ರಯತ್ನಗಳನ್ನು ಪ್ರಧಾನಿ ಮೆಚ್ಚಿದರು. ಇದೇ ಮಾದರಿಯ ಕಾರ್ಯತಂತ್ರವನ್ನು ಸಂಪೂರ್ಣ ಎನ್ಸಿಆರ್ನಲ್ಲಿ ಅನುಸರಿಸುವಂತೆ ಇತರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದರು’ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಒಂದೇ ದಿನ ೨೭,೧೧೪ ಹೊಸ ಪ್ರಕರಣಗಳೊಂದಿಗೆ ಕೋವಿಡ್ -೧೯ ಸೋಂಕು ಪ್ರಕರಣಗಳ ಸಂಖ್ಯೆ 2020 ಜುಲೈ 11ರ ಶನಿವಾರ ೮.೨ ಲಕ್ಷವನ್ನು ತಲುಪಿತು. ಸಾವಿನ ಸಂಖ್ಯೆ ೨೨,೧೨೩ ಕ್ಕೆ ಏರಿತು. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಸೋಂಕು ಪ್ರಕರಣಗಳ ಸಂಖ್ಯೆ ಏಳು ಲಕ್ಷವನ್ನು ತಲುಪಿದ ಬಳಿಕ ಕೇವಲ ೪ ದಿನಗಳಲ್ಲಿ ಶನಿವಾರ ೮ ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಸತತ ಎಂಟನೇ ದಿನವೂ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ೨೨,೦೦೦ಕ್ಕಿಂತ ಹೆಚ್ಚಾಗಿವೆ. ಶನಿವಾರ ಬೆಳಿಗ್ಗೆ ೮ ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ, ೨೪ ಗಂಟೆಗಳಲ್ಲಿ ೫೧೯ ಮಂದಿ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ ೨೨,೧೨೩ ಕ್ಕೆ ಏರಿತು. ಒಟ್ಟು ಕೊರೋನವೈರಸ್ ಸೋಂಕಿನ ಸಂಖ್ಯೆ ಶನಿವಾರ ೮,೨೦,೯೧೬ಕ್ಕೆ ಏರಿದರೂ ಆಶಾದಾಯಕ ಬೆಳವಣಿಗೆಯಲ್ಲಿ ಚೇತರಿಕೆಯ ಪ್ರಮಾಣ ಕೂಡಾ ಗಣನೀಯವಾಗಿ ಹೆಚ್ಚಿದೆ. ಒಟ್ಟು ಸೋಂಕು ಪ್ರಕರಣಗಳಲ್ಲಿ ೫,೧೫,೩೮೫ ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ ೨,೮೩,೪೦೭ ಆಗಿದೆ ಎಂದು ಅಂಕಿಸಂಖ್ಯೆಗಳು ತಿಳಿಸಿವೆ. "ದೇಶದಲ್ಲಿ ಇದುವರೆಗೆ ಸುಮಾರು ಶೇಕಡಾ ೬೨.೭೮ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಹಿಮಾಲಯ ಪ್ರದೇಶದಲ್ಲಿ ಭಾರೀ ಭೂಕಂಪವೊಂದು ಸಂಭವಿಸುವ ಸಾಧ್ಯತೆ ಬಗ್ಗೆ ಭೂಕಂಪ ತಜ್ಞರು 2020 ಜುಲೈ 11ರ ಶನಿವಾರ ಎಚ್ಚರಿಕೆ ನೀಡಿದ್ದು, ಶಿಮ್ಲಾದಂತಹ ಪರ್ವತ ಪಟ್ಟಣಗಳು ಮತ್ತು ದೆಹಲಿಯಂತಹ ಪ್ರಸ್ಥಭೂಮಿ ನಗರಗಳು ಈ ಭಾರೀ ಭೂಕಂಪ ಎದುರಿಸಲು ಸಜ್ಜಾಗಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. ೨೦೧೫ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪವೇ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ್ದ ಕೊನೆಯ ದೊಡ್ಡ ಭೂಕಂಪವಾಗಿತ್ತು. ರಿಕ್ಟರ್ ಮಾಪಕದಲ್ಲಿ ೭.೮ರ ತೀವ್ರತೆಯ ಈ ಭೂಕಂಪದಲ್ಲಿ ೯೦೦೦ ಜನರು ಸಾವನ್ನಪ್ಪಿ, ಇತರ ೨೨,೦೦೦ ಮಂದಿ ಗಾಯಗೊಂಡಿದ್ದರು. ಈ ಭೂಕಂಪದಿಂದ ನೇಪಾಳದ ರಾಜಧಾನಿ ಕಠ್ಮಂಡುವಿನ ಬಹುತೇಕ ಭಾಗ ನೆಲಸಮವಾಗಿತ್ತು. ಭೂಕಂಪ ತಜ್ಞರು ಪ್ರಕಟಿಸಿರುವ ಲೇಖನ ಒಂದರ ಪ್ರಕಾರ ಈ ಭೂಕಂಪದ ಪರಿಣಾಮವಾಗಿ ಕಠ್ಮಂಡುವಿನ ದಕ್ಷಿಣ ಭಾಗವು ೧.೫ ಮೀಟರಿನಷ್ಟು ಪಕ್ಕಕ್ಕೆ ಸರಿದಿತ್ತು. ಆದರೂ ಎಂಡಬ್ಲ್ಯೂ೮ನ್ನೂ ಮೀರಿದ ಭೂಕಂಪದಷ್ಟು ದೊಡ್ಡ ಭೂಕಂಪ ಇದಾಗಿರಲಿಲ್ಲ. ಆದರೆ ಇನ್ನೂ ದೊಡ್ಡ ಭೂಕಂಪಗಳಿಗೆ ಸೂಕ್ತವಾದ ಸ್ಥಿತಿಯನ್ನು ಇದು ನಿರ್ಮಾಣ ಮಾಡಿತು ಎಂದು ತಜ್ಞರು ಹೇಳಿದ್ದಾರೆ. ’ಬೃಹತ್ ಭೂಕಂಪವು ಯಾವಾಗ ಸಂಭವಿಸಬಹುದು ಎಂಬ ಬಗ್ಗೆ ಭೂಕಂಪ ತಜ್ಞರಿಗೆ ಖಚಿತತೆ ಇಲ್ಲ. ಇದು ಬಹುಬೇಗನೇ ಸಂಭವಿಸಬಹುದು ಅಥವಾ ಕೆಲವು ನೂರು ವರ್ಷಗಳ ಬಳಿಕ ಸಂಭವಿಸಬಹುದು. ಬೇಗನೇ ಸಂಭವಿಸಲಿ ಅಥವಾ ತಡವಾಗಿ ಸಂಭವಿಸಲಿ, ರಾಷ್ಟ್ರವು ಈ ಭಾರೀ ಭೂಕಂಪವನ್ನು ಎದುರಿಸಲು ಸಜ್ಜಾಗಿ ಇರುವುದು ಒಳಿತು ತಜ್ಞರು ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಜೈಪುರ: ತಮ್ಮ ಸರ್ಕಾರವನ್ನು ಉರುಳಿಸುವ ಹತಾಶ ಯತ್ನವಾಗಿ ವಿರೋಧೀ ಭಾರತೀಯ ಜನತಾ ಪಕ್ಷವು (ಬಿಜೆಪಿ) ’ಮಾರುಕಟ್ಟೆಗಲ್ಲಿ ಕುರಿಗಳನ್ನು ಖರೀದಿಸುವಂತೆ’ ಶಾಸಕರನ್ನು ಖರೀದಿಸಲು ಯತ್ನಿಸಿತ್ತು, ಆದರೆ ಕಾಂಗ್ರೆಸ್ ಪಕ್ಷವು ಇದನ್ನು ವಿಫಲಗೊಳಿಸಿತು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ 2020 ಜುಲೈ 11ರ ಶನಿವಾರ ಇಲ್ಲಿ ಹೇಳಿದರು. ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷ ಒಡ್ಡುವ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಯತ್ನಗಳ ಜೊತೆಗೆ ಸಂಪರ್ಕ ಹೊಂದಿದ್ದ ಇಬ್ಬರ ವಿರುದ್ಧ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣಾ ತಂಡವು (ಎಸ್ ಒಜಿ) ಈಗಾಗಲೇ ಪ್ರಕರಣ ದಾಖಲಿಸಿದೆ ಎಂದು ಅವರು ಹೇಳಿದರು. ಬಂಧಿತ ವ್ಯಕ್ತಿಗಳ ನಡುವಣ ಮೊಬೈಲ್ ಸಂಭಾಷಣೆಯನ್ನು ಆಧರಿಸಿ ಎಫ್ ಐಆರ್ ದಾಖಲಿಸಲಾಗಿದ್ದು, ಜೂನ್ ೧೯ರಂದು ನಡೆದ ರಾಜ್ಯಸಭಾ ಚುನಾವಣೆಗೂ ಮುಂಚಿನಿಂದಲೇ ಸರ್ಕಾರ ಉರುಳಿಸುವ ಯತ್ನ ನಡೆದಿತ್ತು ಎಂದು ಮುಖ್ಯಮಂತ್ರಿ ಆಪಾದಿಸಿದರು. ’ಇಡೀ ಆಡಳಿತವು ಕೊರೋನಾವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಲು ಕಾರ್ಯಮಗ್ನವಾಗಿದ್ದಾಗ, ಬಿಜೆಪಿ ನಾಯಕರು ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಯತ್ನಿಸಿದರು. ನಾವೆಲ್ಲರೂ ವೈರಸ್ ವಿರುದ್ಧ ಹೋರಾಟಕ್ಕೆ ಗಮನ ನೀಡಬೇಕಾಗಿದ್ದ ಹೊತ್ತಿನಲ್ಲಿ ಸಚಿವರು, ಶಾಸಕರು ಮತ್ತು ನಾಯಕರು ಸರ್ಕಾರ ಉಳಿಸಿಕೊಳ್ಳುವತ್ತ ಗಮನ ಹರಿಸಬೇಕಾಯಿತು’ ಎಂದು ಗೆಹೋಟ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಹಾಂಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ವೈರಾಣು ಮತ್ತು ರೋಗ ನಿರೋಧಕ ಶಾಸ್ತ್ರದಲ್ಲಿ ( ವೈರಾಲಜಿ ಮತ್ತು ಇಮ್ಯುನೊಲಾಜಿ) ತಜ್ಞೆಯಾಗಿರುವ ಡಾ. ಲಿ-ಮೆಂಗ್ ಯಾನ್, ಚೀನಾಕ್ಕೆ ಮಾರಕ ಕೊರೋನಾವೈರಸ್ ಬಗ್ಗೆ ತಿಳಿದಿತ್ತು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಪ್ರೊಫೆಸರ್ ಮಲಿಕ್ ಪೀರಿಸ್ ಅದನ್ನು ಮುಚ್ಚಿಹಾಕಿದರು ಎಂದು ಆರೋಪಿಸಿದ್ದಾರೆ. ಪೀರಿಸ್ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಸಂಯೋಜಿತರಾಗಿರುವ ಪ್ರಯೋಗಾಲಯದ ಸಹ ನಿರ್ದೇಶಕರಾಗಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಯಾನ್ ಅವರು "ಕೊರೋನವೈರಸ್ ಸಾಂಕ್ರಾಮಿಕದ ಬಗ್ಗೆ ಚೀನಾ ಸರ್ಕಾರಕ್ಕೆ ತಿಳಿದಿತ್ತು ಎಂದು ನಾನು ನಂಬುತ್ತೇನೆ’ ಎಂದು ಹೇಳಿದರು. ಯಾನ್ ಅವರು ಹಾಂಕಾಂಗ್ ನಿಂದ ಪರಾರಿಯಾಗಿದ್ದಾರೆ. ’ಅವರು ಶಿಳ್ಳೆಗಾರರನ್ನು ಹೇಗೆ ಪರಿಗಣಿಸುತ್ತಾರೆಂದು ನನಗೆ ತಿಳಿದಿದೆ’ ಎಂದು ಯಾನ್ ನುಡಿದರು. ’ಈ ಕ್ಷೇತ್ರದ ಕೆಲವು ಉನ್ನತ ತಜ್ಞರಾದ ನನ್ನ ಮೇಲ್ವಿಚಾರಕರು ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ನಾನು ಮಾಡುತ್ತಿರುವ ಸಂಶೋಧನೆಗಳನ್ನು ಸಹ ನಿರ್ಲಕ್ಷಿಸಿದ್ದಾರೆ, ಅದು ಅನೇಕ ಜೀವಗಳನ್ನು ಉಳಿಸಬಹುದಿತ್ತು’ ಎಂದು ಯಾನ್ ಹೇಳಿದರು. ’ನನ್ನ ಜೀವಕ್ಕೆ ಅಪಾಯವಿದೆ ಎಂಬುದಾಗಿ ಅಪಪ್ರಚಾರ ಮಾಡುವ ಮೂಲಕ ಚೀನಾವು ನನ್ನ ಪ್ರತಿಷ್ಠೆಯನ್ನು ಹಾಳು ಮಾಡಲು ಯತ್ನಿಸುತ್ತಿದೆ’ ಎಂದು ಪ್ರಸ್ತುತ ತಲೆಮರೆಸಿಕೊಂಡಿರುವ ಯಾನ್ ಆಪಾದಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment