Tuesday, May 23, 2023

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

 ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಕೆಲವು ವ್ಯಕ್ತಿಗಳು ಹಾಗೆ. ಯಾವುದೋ ಸಂದರ್ಭದಲ್ಲಿ ಪರಿಚಯವಾಗುತ್ತಾರೆ. ಬದುಕಿನುದ್ದಕ್ಕೂ ಮರೆಯದೆ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತು ಬಿಡುತ್ತಾರೆ. ವೃತ್ತಿ ಜೀವನದಲ್ಲಿ ಪರಿಚಿತರಾಗುವ ಮಂದಿಯಲ್ಲಿ ಹೀಗೆ ಮನಸ್ಸಿನೊಳಗೆ ನಿಂತು ಬಿಡುವ ಮಂದಿ ಬಲು ಅಪರೂಪ. ಅಂತಹ ಅಪರೂಪದ ಒಬ್ಬ ವ್ಯಕ್ತಿ ಸೂರ್ಯ ನಾರಾಯಣ ಪಂಜಾಜೆ ಸಂಕ್ಷಿಪ್ತದಲ್ಲಿ ಎಸ್‌ ಎನ್‌ ಪಂಜಾಜೆ.

ಸುಮಾರು ಒಂದೂವರೆ ದಶಕಕ್ಕೂ ಹಿಂದಿನ ಕಥೆ ಅದು. ಪ್ರಜಾವಾಣಿ ಕಚೇರಿಯಲ್ಲಿ ನಾನು ಇದ್ದಾಗ ಪಂಚೆ, ಶರಟು ಹಾಕಿಕೊಂಡಿದ್ದ ಆ ವ್ಯಕ್ತಿ ಬಂದಿದ್ದರು.

ʼಯಕ್ಷಗಾನಕ್ಕೊಂದು ಅಕಾಡೆಮಿ ಬೇಕು. ಸಂಗೀತ, ನಾಟಕ, ಸಾಹಿತ್ಯಕ್ಕೆಲ್ಲ ಅಕಾಡೆಮಿಗಳಿವೆ. ಯಕ್ಷಗಾನಕ್ಕೆ ಏಕಿಲ್ಲ? ಹೀಗಾಗಿ ನಾವೊಂದು ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಖಂಡಿತ ಬರಬೇಕು.ʼ ಎಂದು ಆತ್ಮೀಯವಾಗಿ ಮಾತನಾಡಿ, ಆಗ್ರಹಿಸಿ ಹೋಗಿದ್ದರು.

ಆದಿನ, ಮಹಾತ್ಮಾ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿಗೆ ಹೋದರೆ ಯಾವುದೇ ಪ್ರತಿಭಟನೆ, ಘೋಷಣೆಗಳ ಸದ್ದಿಲ್ಲ. ಆದರೆ ಬರೇ ಚೆಂಡೆಯ ಸದ್ದು ಕೇಳುತ್ತಿತ್ತು. ಪಂಜಾಜೆ ಮತ್ತು ಅವರು ಕೆಲವು ಗೆಳೆಯರು ಗಾಂಧಿ ಪ್ರತಿಮೆಯ ಬಳಿ ನಿಂತುಕೊಂಡು ಚೆಂಡೆ ಭಾರಿಸುತ್ತಿದ್ದರು. ಪಕ್ಕದಲ್ಲಿ ದೊಡ್ಡ ಬ್ಯಾನರ್.‌ ʼಯಕ್ಷಗಾನಕ್ಕೂ ಅಕಾಡೆಮಿ ಬೇಕು..ʼ

ಘೋಷಣೆಗಳಿಲ್ಲದೆ ಕಲೆಯ ಪ್ರದರ್ಶನದ ಮೂಲಕವೇ ಯಕ್ಷಗಾನಕ್ಕೆ ಅಕಾಡೆಮಿ ಬೇಕು ಎಂಬ ಕೂಗು ಹಾಕಿದ್ದು ನಿಜಕ್ಕೂ ಪಂಜಾಜೆಯವರ ವಿಶಿಷ್ಟತೆಯಾಗಿತ್ತು. ಅದಾದ ಬಳಿಕ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡಿತು.

ಯಕ್ಷಗಾನವನ್ನು ನಾಡಿನಿಂದ ವಿದೇಶದವರೆಗೂ ಒಯ್ಯುವುದಕ್ಕೆ ಕೂಡಾ ಪಂಜಾಜೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದರು.   ರಾಜ್ಯದ ಹಲವೆಡೆ ಅಖಿಲ ಭಾರತ ಯಕ್ಷಗಾನ ಬಯಲಾಟ, ಯಕ್ಷಗಾನಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನದವರಾದ ಎಸ್.‌ ಎನ್.‌ ಪಂಜಾಜೆ ೧೯೮೦ರ ದಶಕದಲ್ಲಿ ಬೆಂಗಳೂರಿಗೆ ತೆರಳಿ ಯಕ್ಷಗಾನ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಯಕ್ಷಗಾನ ಪಾತ್ರಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿದ್ದ ಅವರನ್ನು ಉಡುಪಿಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ ವತಿಯಿಂದ ನಡೆದ ಮೊದಲ ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.

ಬೆಂಗಳೂರಿನಲ್ಲಿ ವೇಷಭೂಷಣ, ಪ್ರಸಾಧನ ನಿರ್ವಹಿಸುತ್ತಾ ಯಕ್ಷಗಾನ ಬೆಳೆಸಿದವರಲ್ಲಿ ಅವರು ಒಬ್ಬರು.

ಪರಿಚಿತರಾದ ಬಳಿಕ ನಿರಂತರವಾಗಿ ಆತ್ಮೀಯ ಸಂಪರ್ಕದಲ್ಲಿದ್ದ ಪಂಜಾಜೆ ಕೆಲಸ ಸಮಯದ ಹಿಂದೆ ಸಿಕ್ಕಿದ್ದಾಗ ಅವರ ಮನೆಗೊಮ್ಮೆ ಸಕುಟುಂಬ ಸಮೇತರಾಗಿ ಬರಬೇಕು. ಒಂದು ಇಡೀದಿನ ಒಟ್ಟಿಗೆ ಕಾಲ ಕಳೆಯಬೇಕು ಎಂದು ಹಾರೈಸಿದ್ದರು.

ಬರುತ್ತೇನೆ ಎಂದು ಒಪ್ಪಿಕೊಂಡರೂ ಹೋಗಲು ಸಾಧ್ಯವಾಗಿರಲಿಲ್ಲ.

ಇನ್ನು ಅದೆಲ್ಲಿ ಸಾಧ್ಯ?

ಪಂಜಾಜೆ ೨೦೨೩ ಮೇ ೨೨ರ ಸೋಮವಾರ ದೈವಾಧೀನರಾಗಿದ್ದಾರೆ. ಕ್ಷಮಿಸಿ ಪಂಜಾಜೆ.

ಪಂಜಾಜೆ ಅವರ ಪತ್ನಿ ಮನೋರಮಾ, ಪುತ್ರ ಕೈಲಾಸ ಭಟ್‌ ಸೇರಿದಂತೆ ಕುಟುಂಬವರ್ಗ, ಗೆಳೆಯರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಕೋರುವೆ.

-ನೆತ್ರಕೆರೆ ಉದಯಶಂಕರ

ಅಮೆರಿಕದಲ್ಲಿ ʼಅಕ್ಕʼ ಸಮ್ಮೇಳನಕ್ಕೆ ಅವರು ಚೆಂಡೆಯ ಸದ್ದನ್ನು ಒಯ್ದ ಬಗ್ಗೆ ʼಪರ್ಯಾಯʼ ಪ್ರಕಟಿಸಿದ್ದ ಲೇಖನ ಇಲ್ಲಿದೆ:

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...! 

No comments:

Advertisement