Showing posts with label ಗ್ರಾಹಕರ ಸುಖದುಃಖ. Show all posts
Showing posts with label ಗ್ರಾಹಕರ ಸುಖದುಃಖ. Show all posts

Tuesday, November 12, 2024

50 ಪೈಸೆಗೆ ದಂಡ 15,000 ರೂಪಾಯಿ!

 50 ಪೈಸೆಗೆ ದಂಡ 15,000 ರೂಪಾಯಿ!

ಕೇವಲ 50 ಪೈಸೆ. ಕೊಡದಿದ್ದರೆ ಏನಾಗುತ್ತದೆ? ಅಂತ ನಿರ್ಲಕ್ಷಿಸುವವರು ಬಹಳ ಮಂದಿ. ಆದರೆ ಗ್ರಾಹಕರಿಗೆ 50 ಪೈಸೆಯನ್ನು ಹಿಂತಿರುಗಿಸದೇ, ಅದನ್ನು 'ರೌಂಡ್ ಆಫ್' ಮಾಡಿದ್ದು ಇಂಡಿಯಾ ಪೋಸ್ಟ್‌ಗೆ ದುಬಾರಿಯಾಗಿ ಪರಿಣಮಿಸಿದೆ.

ಈ ಐವತ್ತು ಪೈಸೆಯನ್ನು 10,000 ರೂಪಾಯಿಗಳ ಪರಿಹಾರ ಮತ್ತು 5000 ರೂಪಾಯಿಗಳ ಖಟ್ಲೆ ವೆಚ್ಚ ಸೇರಿಸಿ ಪಾವತಿ ಮಾಡಿ ಎಂದು ಗ್ರಾಹಕ ನ್ಯಾಯಾಲಯವು ಅಂಚೆ ಇಲಾಖೆಗೆ ಆದೇಶ ನೀಡಿದೆ.

50 ಪೈಸೆ ಪಾವತಿ ಮಾಡದೆ ಅದನ್ನು ರೌಂಡ್‌ ಆಫ್‌ ಮಾಡಿದ್ದು ಅನ್ಯಾಯದ ವ್ಯಾಪಾರೀ ಅಭ್ಯಾಸ ಮತ್ತು ಸೇವಾಲೋಪ ಆಗುತ್ತದೆ ಎಂದು ಕಾಂಚೀಪುರಂ ಜಿಲ್ಲಾ ಗ್ರಾಹಕ ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ದೂರು ಕೊಟ್ಟವರು ಎ ಮಾನಶಾ. ಅವರು 2023ರ ಡಿಸೆಂಬರ್ 13ರಂದು ಕಾಂಚೀಪುರಂಗೆ ಸಮೀಪದ ಪೊಜಿಚಲೂರು ಅಂಚೆ ಕಛೇರಿಯಲ್ಲಿ ನೋಂದಾಯಿತ ಪತ್ರಕ್ಕಾಗಿ 30 ರೂಪಾಯಿ ನಗದು ಪಾವತಿಸಿದ್ದರು. ಆದರೆ ರಶೀದಿಯಲ್ಲಿ ಕೇವಲ 29.50 ರೂಪಾಯಿ ನಮೂದಿಸಲಾಗಿತ್ತು. ಯುಪಿಐ ಮೂಲಕ ನಿಖರವಾದ ಮೊತ್ತವನ್ನು ಪಾವತಿ ಮಾಡ್ತೇನೆ ಅಂತ ಅವರು ಹೇಳಿದರು. ಆದರೆ ʼತಾಂತ್ರಿಕ ಸಮಸ್ಯೆಗಳಿವೆ, ಅದು ಸಾಧ್ಯವಿಲ್ಲ. ಆದ್ದರಿಂದ 30 ರೂಪಾಯಿಗೆ ರೌಂಡ್‌ ಆಫ್‌ ಮಾಡಿದ್ದೇವೆʼ ಅಂತ ಸಿಬ್ಬಂದಿ ಉತ್ತರ ಕೊಟ್ಟರು.

ಮಾನಶಾ ಅವರಿಗೆ ಇದು ಸಣ್ಣ ಸಮಸ್ಯೆಯಲ್ಲ, ಗಹನವಾದ ಸಮಸ್ಯೆ ಅಂತ ಅನಿಸಿತು. ಪ್ರತಿನಿತ್ಯ ಲಕ್ಷಗಟ್ಟಲೆ ವಹಿವಾಟುಗಳು ನಡೆಯುತ್ತವೆ. ಅವುಗಳನ್ನು ಸರಿಯಾಗಿ ಲೆಕ್ಕ ಹಾಕದಿದ್ದರೆ ಸರ್ಕಾರಕ್ಕೆ, ಸಾರ್ವಜನಿಕರಿಗೆ ನಷ್ಟವಾಗುವುದರ ಸಹಿತ ಅನೇಕ ಪರಿಣಾಮಗಳಾಗುತ್ತವೆ ಅಂತ ಅವರು ಭಾವಿಸಿದರು.

ಈ ಪ್ರಕರಣವನ್ನು ಸುಮ್ಮನೇ ಬಿಡಬಾರದು ಎಂದುಕೊಂಡ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ಗ್ರಾಹಕ ನ್ಯಾಯಾಲಯಕ್ಕೆ ಉತ್ತರ ನೀಡಿದ ಅಂಚೆ ಇಲಾಖೆ ತಾಂತ್ರಿಕ ಸಮಸ್ಯೆಗಳಿಂದಾಗಿ ಡಿಜಿಟಲ್ ಮೋಡ್ ಮೂಲಕ ಪಾವತಿಯನ್ನು ಪಡೆಯಲು ಆಗಲಿಲ್ಲ ಎಂದು ಹೇಳಿತು.

ಈ ಹೊತ್ತಿನಲ್ಲಿ ಗ್ರಾಹಕರಿಂದ ನಗದು ಸಂಗ್ರಹಿಸಲಾಗಿದೆ. ಅಲ್ಲದೆ, 50 ಪೈಸೆಗಳನ್ನು 'ಸಂಯೋಜಿತ ಅಂಚೆ ಸಾಫ್ಟ್‌ವೇರ್' ನಲ್ಲಿ ಸ್ವಯಂಚಾಲಿತವಾಗಿ ಪೂರ್ಣಗೊಳಿಸಲಾಗುತ್ತದೆ ಅಂದರೆ ರೌಂಡ್‌ ಆಫ್‌ ಮಾಡಲಾಗುತ್ತದೆ ಮತ್ತು ಅಂಚೆ ಖಾತೆಗಳಲ್ಲಿ ಸರಿಯಾಗಿ ಲೆಕ್ಕ ಹಾಕಲಾಗುತ್ತದೆ ಎಂದು ಅದು ಸಮಜಾಯಿಷಿ ನೀಡಿತು.

'ಸ್ವಯಂಚಾಲಿತವಾಗಿ ಪೂರ್ಣಗೊಳ್ಳುವ ಮೊತ್ತ' ಅಂದರೆ ರೌಂಡ್‌ ಆಫ್‌ ಮಾಡುವ ಮೊತ್ತವು 'ಕೌಂಟರ್ ಖಾತೆಗಳ ಸಲ್ಲಿಕೆ'ಯಲ್ಲಿ ಪ್ರತ್ಯೇಕವಾಗಿ ಪ್ರತಿಫಲಿಸುತ್ತದೆ. ಹೀಗಾಗಿ ದೂರು ಸ್ವೀಕಾರಕ್ಕೆ ಅರ್ಹವಲ್ಲʼ ಎಂದು ಅಂಚೆ ಇಲಾಖೆ ವಾದಿಸಿತು.

"50 ಪೈಸೆಗಿಂತ ಕಡಿಮೆ ಭಾಗದ ಮೊತ್ತವನ್ನು ಒಳಗೊಂಡಿರುವ ಮೊತ್ತಕ್ಕೆ, ವಸ್ತು/ ಪತ್ರವನ್ನು ಬುಕ್ ಮಾಡಿದ್ದರೆ, ಭಿನ್ನರಾಶಿ ಮೊತ್ತವನ್ನು ಅಂದರೆ ಐವತ್ತು ಪೈಸೆಗಿಂತ ಕಡಿಮೆ ಮೊತ್ತವನ್ನು ನಿರ್ಲಕ್ಷಿಸಲಾಗುತ್ತದೆ ಮತ್ತು ಗ್ರಾಹಕರಿಂದ ಸಂಗ್ರಹಿಸಲಾಗುವುದಿಲ್ಲ. ಅಂತಹ ಭಿನ್ನರಾಶಿ ಮೊತ್ತವನ್ನು ಪೂರ್ಣಗೊಳಿಸುವುದು ಒಟ್ಟು ಮೌಲ್ಯವನ್ನು ಅವಲಂಬಿಸಿರುತ್ತದೆ” ಎಂದೂ ಅಂಚೆ ಇಲಾಖೆ ಪ್ರತಿಪಾದನೆ ಮಾಡಿತು.

 ಉಭಯರ ವಾದವನ್ನು ಆಲಿಸಿದ ನಂತರ, ಗ್ರಾಹಕ ನ್ಯಾಯಾಲಯವು ʼತಂತ್ರಾಂಶ ಸಮಸ್ಯೆಯಿಂದ ಅಥವಾ ಸಾಫ್ಟ್‌ವೇರ್ ಸಮಸ್ಯೆಯಿಂದ 50 ಪೈಸೆಯನ್ನು ಹೆಚ್ಚುವರಿಯಾಗಿ ಸಂಗ್ರಹಿಸಿರುವ ಅಂಚೆ ಕಚೇರಿಯ ಕ್ರಮವು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಅನ್ಯಾಯದ ವ್ಯಾಪಾರ ಅಭ್ಯಾಸ ಆಗುತ್ತದೆʼ ಎಂದು ಅಭಿಪ್ರಾಯ ಪಟ್ಟಿತು.

ಹೀಗಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ದೂರುದಾರರಿಗೆ ಐವತ್ತು ಪೈಸೆ ಮರುಪಾವತಿ ಮಾಡಬೇಕು ಮತ್ತು ಮಾನಸಿಕ ಸಂಕಟ, ಅನ್ಯಾಯದ ವ್ಯಾಪಾರ ಅಭ್ಯಾಸ ಮತ್ತು ಸೇವೆಯಲ್ಲಿನ ಕೊರತೆಗೆ ಪರಿಹಾರವಾಗಿ 10,000 ರೂಪಾಯಿಗಳನ್ನು ಈ ಆದೇಶ ಸ್ವೀಕರಿಸಿದ ದಿನದಿಂದ (ಸೆಪ್ಟೆಂಬರ್ 11, 2024) ಎರಡು ತಿಂಗಳ ಒಳಗೆ ಪಾವತಿ ಮಾಡಬೇಕು ಅಂತ ಆದೇಶ ನೀಡಿತು. ಜೊತೆಗೆ ದೂರುದಾರರಿಗೆ 5,000 ರೂಪಾಯಿಗಳನ್ನು ಖಟ್ಲೆ ವೆಚ್ಚಕ್ಕಾಗಿಯೂ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿತು.

ದೂರುದಾರರು ತಮ್ಮ ದೂರಿನಲ್ಲಿ ತಮಗೆ 50 ಪೈಸೆಯ ಬಾಕಿ ಹಣದ ಜೊತೆಗೆ 'ಮಾನಸಿಕ ಸಂಕಟ'ಕ್ಕೆ ರೂ 2.50 ಲಕ್ಷ ಪರಿಹಾರ ಮತ್ತು ಖಟ್ಲೆ ವೆಚ್ಚವಾಗಿ 10,000 ರೂಪಾಯಿ ಪಾವತಿಸಲು ನಿರ್ದೇಶನ ನೀಡಬೇಕು ಎಂದೂ ಕೋರಿದ್ದರು. ಈ ಕೋರಿಕೆಗೆ ಅರ್ಹತೆ ಇಲ್ಲ ಅಂತ ಹೇಳಿದ ಗ್ರಾಹಕ ನ್ಯಾಯಾಲಯ ಅದನ್ನು ತಳ್ಳಿ ಹಾಕಿತು.

-ನೆತ್ರಕೆರೆ ಉದಯಶಂಕರ

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಇವುಗಳನ್ನೂ ಓದಿರಿ:

ಸಮುದ್ರದಲ್ಲಿ ಮುಳುಗಿದ ದೋಣಿ ಭಟ್ಕಳದಲ್ಲಿ ತೇಲಿತೇ?

ಅಪಘಾತ ಪರಿಹಾರ ಪಡೆಯಲು ಚಾಲನಾ ಲೈಸೆನ್ಸ್ ಬೇಕೇ?

ಚಿಟ್ ಫಂಡ್ ಹಣ ಪಡೆಯಲು ಬೇಕೆಷ್ಟು ಭದ್ರತೆ?

ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!

ಮನವಿ ಮಾಡಿದರೂ ವರ್ಗವಾಗದ ಆರ್.ಡಿ. ಖಾತೆ..!

ಬೇಡದಿದ್ದರೂ ಸಾಲಕೊಟ್ಟ ಬ್ಯಾಂಕ್...!

ನಮೂದು ದರ ಒಂದು, ಮಾರುವ ದರ ಇನ್ನೊಂದು..!

ಮಂಜೂರು ಮಾಡಿದ ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕು..!

35 ರೂಪಾಯಿ ಚಿಪ್ಸ್, ರೂ. 50,000 ಪರಿಹಾರ..! (ಗ್ರಾಹಕ ಜಾಗೃತಿ)

Free Flight / Free Family Holiday..! ವಿದೇಶ ಪಯಣ ಮತ್ತು ರಜಾದ ಮಜಾ..!

Farmers Won The Battle

wake up Consumer

When your telephone rings till you fed up...!

Don't know homeopathy, prescribes allopathic medicine!

How to win in Consumer Court?

Monday, October 3, 2022

ಉತ್ಪನ್ನದ "ಮೂಲ ದೇಶ" ಉಲ್ಲೇಖಿಸದಿದ್ದರೆ ಸೇವಾ ಲೋಪ

 ಉತ್ಪನ್ನದ "ಮೂಲ ದೇಶ" ಉಲ್ಲೇಖಿಸದಿದ್ದರೆ ಸೇವಾ ಲೋಪ

 ಬೆಂಗಳೂರು: ಮಹತ್ವದ ತೀರ್ಪೊಂದರಲ್ಲಿ ಗ್ರಾಹಕ ನ್ಯಾಯಾಲಯವು (ಗ್ರಾಹಕ ವೇದಿಕೆ) ಬಹುಶಃ ಇದೇ ಮೊದಲ ಬಾರಿಗೆ, ಮಾರಾಟಗಾರನು ಉತ್ಪನ್ನದ "ಮೂಲ ದೇಶ" ವನ್ನು ಉಲ್ಲೇಖಿಸದೇ ಇದ್ದುದಕ್ಕಾಗಿ ಇ-ಕಾಮರ್ಸ್ ವೇದಿಕೆಯನ್ನು ಹೊಣೆಗಾರರನ್ನಾಗಿ ಮಾಡಿ ತೀರ್ಪು ನೀಡಿದೆ. ಇಂತಹ ವರ್ತನೆ ಸೇವಾ ಲೋಪವಾಗುತ್ತದೆ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.

ಗ್ರಾಹಕರ ರಕ್ಷಣೆ (ಇ-ಕಾಮರ್ಸ್ ನಿಯಮಗಳು) 2020 ರ ಅಡಿಯಲ್ಲಿ, ಉತ್ಪನ್ನದ ಮೂಲ ದೇಶದ ಬಗ್ಗೆ ಮಾಹಿತಿಯನ್ನು ಒದಗಿಸಲು ಮಾರಾಟಗಾರನು ನಿರ್ಬಂಧಿತನಾಗಿರುತ್ತಾನೆ ಮತ್ತು ಇ-ಕಾಮರ್ಸ್ ಮಾರುಕಟ್ಟೆ ಸ್ಥಳವು ಅಗತ್ಯ ಮಾಹಿತಿಯನ್ನು ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳಬೇಕು, ಇದರಿಂದ ಗ್ರಾಹಕರು ತಿಳುವಳಿಕೆಯುಕ್ತ ಆಯ್ಕೆ ಮಾಡಿಕೊಳ್ಳಬಹುದು ಎಂದು ಶ್ರೀಮತಿ ಉಮಾ ವೆಂಕಟ ಸುಬ್ಬ ಲಕ್ಷ್ಮಿ (ಅಧ್ಯಕ್ಷರು), ಶ್ರೀಮತಿ ಸಿ ಲಕ್ಷ್ಮೀ ಪ್ರಸನ್ನ (ಸದಸ್ಯರು) ಮತ್ತು ಶ್ರೀಮತಿ ಮಾಧವಿ ಸಾಸನಕೋಟ (ಸದಸ್ಯರು) ಅವರನ್ನು ಒಳಗೊಂಡ ಹೈದರಾಬಾದಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಸ್ಪಷ್ಟ ಪಡಿಸಿದೆ.

ಇ-ಕಾಮರ್ಸ್ ನಿಯಮಗಳ ಯಾವುದೇ ಉಲ್ಲಂಘನೆಯಾಗಿದ್ದರೆ, ಇ-ಕಾಮರ್ಸ್ ಮಾರುಕಟ್ಟೆ ಸ್ಥಳವು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79 ರ ಅಡಿಯಲ್ಲಿ ಮಧ್ಯವರ್ತಿಗಳಿಗೆ ಲಭ್ಯವಿರುವ "ಸುರಕ್ಷಿತ ಸ್ಥಳ" ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು  ಆಯೋಗ ಹೇಳಿದೆ.

ಈ ಸೇವಾ ಲೋಪಕ್ಕಾಗಿ, ಆಯೋಗವು ಪೇಟಿಎಂ (ಇ-ಕಾಮರ್ಸ್ ಮಾರುಕಟ್ಟೆ ಸ್ಥಳ) ಮತ್ತು ಯುನಿ ಒನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಮಾರಾಟಗಾರ) ಇಬ್ಬರನ್ನೂ ಹೊಣೆಗಾರರನ್ನಾಗಿ ಮಾಡಿತು ಮತ್ತು ಪ್ರಕರಣದ ದೂರುದಾರರಾದ ವಕೀಲ ಬಾಗ್ಲೇಕರ್ ಆಕಾಶ್ ಕುಮಾರ್ ಅವರಿಗೆ ರೂ.15,000 ಪರಿಹಾರವನ್ನು ನೀಡುವಂತೆ ಆದೇಶ ಮಾಡಿದೆ.

ಪ್ರಕರಣ ಏನು?

ಆಕಾಶ್ ಕುಮಾರ್ ಅವರು ಆಗಸ್ಟ್ 2020 ರಲ್ಲಿ ಪೇಟಿಎಂ (Paytm) ಮೂಲಕ 13,440 ರೂಪಾಯಿಗಳಿಗೆ ಖರೀದಿಸಿದ ಉಷಾ ಹೊಲಿಗೆ ಯಂತ್ರಕ್ಕೆ ಸಂಬಂಧಿಸಿದ ದೂರಿನ ಪ್ರಕರಣ ಇದು. ತಾವು ಆರ್ಡರ್‌ ಮಾಡಿದ್ದ ಉತ್ಪನ್ನವು ತಲುಪಿಸಿದಾಗ, ದೂರುದಾರರಿಗೆ ಯಂತ್ರವು ಥೈಲ್ಯಾಂಡಿನಲ್ಲಿ ತಯಾರಿಸಲ್ಪಟ್ಟಿದೆ ಎಂಬುದು ತಿಳಿಯಿತು.

ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಗಳು, 2020 ರ ನಿಯಮ 6(5)(ಡಿ) ಅಡಿಯಲ್ಲಿ ಕಡ್ಡಾಯಗೊಳಿಸಿದ ಪ್ರಕಾರ ತಯಾರಕರು ಸೈಟ್‌ನಲ್ಲಿ ಮೂಲದ ದೇಶವನ್ನು ಪ್ರದರ್ಶಿಸಿರಲಿಲ್ಲ. ಯಾವುದೇ ಮಾಹಿತಿಯನ್ನು ನೀಡದ ಕಾರಣ, ದೂರುದಾರರು ಉತ್ಪನ್ನವನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂದು ಭಾವಿಸಿದರು. ಆನ್‌ಲೈನ್ ಪೋರ್ಟಲ್‌ನಲ್ಲಿ ಮೂಲದ ದೇಶವನ್ನು ನಮೂದಿಸಿದ್ದರೆ ತಾನು ಹೊಲಿಗೆ ಯಂತ್ರವನ್ನು ಖರೀದಿಸುತ್ತಿರಲಿಲ್ಲ ಎಂದು ದೂರುದಾರರು ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು.

ದೂರನ್ನು ವಿರೋಧಿಸಿದ ಪೇಟಿಎಂ (Paytm)  ತಾನು ವಿಭಿನ್ನ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆಯನ್ನು ಒದಗಿಸುವ ಆನ್‌ಲೈನ್ ಮಾರುಕಟ್ಟೆ ಸ್ಥಳವಾಗಿದ್ದು, ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಮಾರಾಟ ವಹಿವಾಟುಗಳನ್ನು ಸುಗಮಗೊಳಿಸಲು ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು ಉತ್ಪನ್ನದ ಮಾರಾಟದಲ್ಲಿ ಯಾವುದೇ ನೇರ ಪಾಲ್ಗೊಳ್ಳುವಿಕೆ ಹೊಂದಿಲ್ಲ ಎಂದು ವಾದಿಸಿತು.

ಸಂಬಂಧಪಟ್ಟ ಇತರ ಎಲ್ಲ ಮಾಹಿತಿಯನ್ನು ಒದಗಿಸಿದಾಗ ಕೇವಲ ಮೂಲದ ದೇಶಕ್ಕೆ ಸಂಬಂಧಿಸಿದ ಮಾಹಿತಿಯ ಲೋಪವು ಅಕ್ರಮ ವ್ಯಾಪಾರ ಅಭ್ಯಾಸಕ್ಕೆ ಸಮವಲ್ಲ ಎಂದು ತಯಾರಕರು ವಾದಿಸಿದರು. ತಯಾರಕರಿಂದ ಸ್ಪಷ್ಟೀಕರಣವನ್ನು ಪಡೆಯುವ ಆಯ್ಕೆಯನ್ನು ಹೊಂದಿರುವುದರಿಂದ ದೂರುದಾರನು ಊಹೆಯ ಮೇಲೆ ತನ್ನ ನಿರ್ಧಾರವನ್ನು ಆಧರಿಸಿರುವ ಅಗತ್ಯವಿಲ್ಲ ಎಂದು ಅದು ಅಹವಾಲು ಸಲ್ಲಿಸಿತು. ಉದ್ದೇಶಪೂರ್ವಕವಲ್ಲದ ಲೋಪದಿಂದಾಗಿ ದೂರುದಾರರಿಗೆ ಯಾವುದೇ ಹಾನಿ, ನಷ್ಟ, ಮಾನಸಿಕ ಯಾತನೆ ಅಥವಾ ಆಘಾತ ಉಂಟಾಗುವುದಿಲ್ಲ ಎಂದು ಅದು ಪ್ರತಿಪಾದಿಸಿತು.

ಆದರೆ, ಮೂಲದ ದೇಶವನ್ನು ಮರೆಮಾಚುವುದು ಮೋಸಗೊಳಿಸುವ ವ್ಯಾಪಾರೀ ಅಭ್ಯಾಸಕ್ಕೆ ಸಮ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಭಿಪ್ರಾಯಪಟ್ಟಿತು.

 "ದೇಶದ ಮೂಲವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೆ ನಿರ್ದಿಷ್ಟ ಉತ್ಪನ್ನವನ್ನು ಖರೀದಿಸಲು ಗ್ರಾಹಕರನ್ನು ಪ್ರೇರೇಪಿಸುವುದನ್ನು ಇ-ಕಾಮರ್ಸ್ ನಿಯಮಗಳು 2020 ರ ಅಡಿಯಲ್ಲಿ ಒದಗಿಸಬೇಕಾದ ಕಡ್ಡಾಯ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಿಲ್ಲ ಎಂಬುದಾಗಿ  ಅರ್ಥೈಸಿಕೊಳ್ಳಬಹುದು" ಎಂದು ವೇದಿಕೆ ಅಭಿಪ್ರಾಯಪಟ್ಟಿತು.

"ಪ್ರಕರಣವು ಸಂಬಂಧಿತ ನಿಯಮಗಳ ವ್ಯಾಪ್ತಿಯಲ್ಲಿ ಬರುತ್ತದೆ, ಮಾರಾಟಗಾರನು ತನ್ನ ಪ್ಲಾಟ್‌ಫಾರ್ಮ್ ಅಥವಾ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲು ಇ-ಕಾಮರ್ಸ್ ಘಟಕಕ್ಕೆ ಎಲ್ಲ ಮಾಹಿತಿಯನ್ನು ಒದಗಿಸಬೇಕು ಎಂದು ನಿರ್ದಿಷ್ಟಪಡಿಸುತ್ತದೆ, ಅಂದರೆ, ಉತ್ಪನ್ನದ ಮೂಲ ದೇಶದ ಮಾಹಿತಿ ಸೇರಿದಂತೆ ಖರೀದಿಯ ಪೂರ್ವ ಹಂತದಲ್ಲಿ ಗ್ರಾಹಕರು ತಿಳುವಳಿಕೆಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಮಾರಾಟಕ್ಕೆ ನೀಡಲಾಗುವ ಸರಕುಗಳು ಮತ್ತು ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲ ಸಂಬಂಧಿತ ವಿವರಗಳನ್ನು ಮಾರಾಟಗಾರ ಕಡ್ಡಾಯವಾಗಿ ಒದಗಿಸಬೇಕು. ಕಡ್ಡಾಯ ಮಾಹಿತಿಯನ್ನು ಒದಗಿಸದಿರುವುದು ಗ್ರಾಹಕರ ಆಯ್ಕೆಯನ್ನು ವಿರೂಪಗೊಳಿಸುವ ಮೋಸಗೊಳಿಸುವ ಅಭ್ಯಾಸವಾಗುತ್ತದೆ" ಎಂದು ವೇದಿಕೆ ಸ್ಪಷ್ಟ ಪಡಿಸಿತು.

ಕಡ್ಡಾಯ ಮಾಹಿತಿ ಒದಗಿಸದೇ ಇರುವ ಮಾರಾಟಗಾರರ ನಿರ್ಲಕ್ಷ್ಯ ವರ್ತನೆಗೆ ಇ-ಕಾಮರ್ಸ್ ಘಟಕವು ಜವಾಬ್ದಾರವಾಗಿದೆ ಎಂದೂ ಆಯೋಗ ಹೇಳಿತು.

ಈ ಹಿನ್ನೆಲೆಯಲ್ಲಿ, ಗ್ರಾಹಕರ ವೇದಿಕೆಯು ಪೇಟಿಎಂನ (Paytm) ವಾದಗಳನ್ನು ತಿರಸ್ಕರಿಸಿತು.

"ಆನ್‌ಲೈನ್ ವ್ಯಾಪಾರಿಗಳ ಹೊಣೆಗಾರಿಕೆಯಲ್ಲಿ ಮಾದರಿ ಬದಲಾವಣೆಯಾಗಿದೆ, ಅವರು ಇಲ್ಲಿಯವರೆಗೆ ಮುಖ್ಯವಾಗಿ ಮಧ್ಯವರ್ತಿಗಳ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ". ಇ-ಕಾಮರ್ಸ್ ನಿಯಮಗಳು ಜಾರಿಗೆ ಬರುವುದರೊಂದಿಗೆ, ಗ್ರಾಹಕರಿಗೆ ಮಾರಾಟಗಾರರಿಂದ ಉಂಟಾದ ಹಾನಿಗೆ ಆನ್‌ಲೈನ್ ವ್ಯಾಪಾರಿಗಳು ನೇರವಾಗಿ ಮತ್ತು ಜವಾಬ್ದಾರಿಯುತವಾಗಿ ಹೊಣೆಗಾರರಾಗುತ್ತಾರೆ. ಮಾರಾಟಗಾರರಿಂದ ನಿರ್ಲಕ್ಷ್ಯದ ನಡವಳಿಕೆಯ ಸಂದರ್ಭಗಳಲ್ಲಿ ಸಹ, ಅಂತಿಮ ಗ್ರಾಹಕರು ಯಾವುದೇ ನಷ್ಟವನ್ನು ಅನುಭವಿಸಿದರೆ, ಹೊಣೆಗಾರಿಕೆಯ ಜವಾಬ್ದಾರಿಯು ಇ-ಕಾಮರ್ಸ್ ಘಟಕದ ಮೇಲೆ ಬೀಳುತ್ತದೆ ಎಂಬುದನ್ನು ಇದು ಸೂಚಿಸುತ್ತದೆಎಂದು ಆಯೋಗ ಹೇಳಿತು.

"ಇ-ಕಾಮರ್ಸ್ ನಿಯಮಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಇ-ಕಾಮರ್ಸ್ ಘಟಕಗಳ ದೋಷಪೂರಿತ ಹೊಣೆಗಾರಿಕೆಯನ್ನು ನಿರ್ದಿಷ್ಟವಾಗಿ ವಿವರಿಸುತ್ತದೆ. ತಮ್ಮನ್ನು ತಾವು ಕೇವಲ ಮಧ್ಯವರ್ತಿಗಳಾಗಿ ಪ್ರಸ್ತುತಪಡಿಸುವ ಮೂಲಕ ಮತ್ತು ಐಟಿ ಕಾಯಿದೆಯ ಸೆಕ್ಷನ್ 79 ರ ಅಡಿಯಲ್ಲಿ ಹೊಣೆಗಾರಿಕೆ ವಿನಾಯಿತಿಯನ್ನು ಕೋರುವ ಮಾಡುವ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು” ಎಂದು ಆಯೋಗ ಹೇಳಿತು.

ಮಾರಾಟಕ್ಕೆ ನೀಡಲಾಗುವ  ಉತ್ಪನ್ನಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಂಡಾಗ, ಮೂಲದ ದೇಶವನ್ನು ಉಲ್ಲೇಖಿಸದಿರುವುದು ಇ-ಕಾಮರ್ಸ್ ನಿಯಮಗಳ ಉಲ್ಲಂಘನೆಯಾಗಿದೆ ಎಂದೂ ಅದು ಹೇಳಿತು.

"ಇ-ಕಾಮರ್ಸ್ ವೆಬ್‌ಸೈಟ್‌ಗಳ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಭಾರತದಲ್ಲಿ ಇ-ಕಾಮರ್ಸ್ ವ್ಯವಹಾರವು ಗ್ರಾಹಕರ ಶಾಪಿಂಗ್ ಅಭ್ಯಾಸಗಳಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ. ಗ್ರಾಹಕರು ಉತ್ಪನ್ನವನ್ನು ಖರೀದಿಸಲು ನಿರ್ಧರಿಸಿದಾಗ, ಅವರು ಪ್ರಾಥಮಿಕವಾಗಿ ತಮ್ಮ ಉತ್ಪನ್ನದ ಜಾಹೀರಾತಿನಲ್ಲಿ ಕಂಪನಿಗಳು ಒದಗಿಸಿದ ಮಾಹಿತಿಯನ್ನು ಅವಲಂಬಿಸಿರುತ್ತಾರೆ. , ಈ ಓಟವು ಅಗ್ರಸ್ಥಾನದಲ್ಲಿರಲು ಸುಳ್ಳು ಹಕ್ಕುಗಳ ದುಷ್ಕೃತ್ಯಗಳು ಮತ್ತು ಮರೆಮಾಚುವ ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹೆಚ್ಚಿಸಲು ಕಾರಣವಾಗಿದೆ. ಸದರಿ ಪ್ರಕರಣದಲ್ಲಿ, ಉತ್ಪನ್ನದ ಮೇಲೆ ಮೂಲದ ದೇಶವನ್ನು ನಮೂದಿಸದಿರುವ ಕ್ರಿಯೆಯು ಸಂಬಂಧಿತ ಇ- ವಾಣಿಜ್ಯ ನಿಯಮಗಳ ಉಲ್ಲಂಘನೆಯಾಗಿದೆ.ಎಂದು ವೇದಿಕೆ ತೀರ್ಪಿನಲ್ಲಿ ಹೇಳಿತು.

ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳನ್ನು ಅನುಸರಿಸಲು ಇ ಕಾಮರ್ಸ್‌ ವೇದಿಕೆ ಮತ್ತು ಮಾರಾಟಗಾರ ಇಬ್ಬರಿಗೂ ವೇದಿಕೆ ನಿರ್ದೇಶಿಸಿತು.

ಸೇವಾ ಲೋಪಕ್ಕಾಗಿ 15,000 ರೂಪಾಯಿಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡುವಂತೆ ಪೇಟಿಎಂ ಮತ್ತು ಮಾರಾಟಗಾರ ಸಂಸ್ಥೆಗೆ ಆಜ್ಞಾಪಿಸಿತು.

Advertisement